ಎನ್.ಆರ್.ಪುರದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಗೃಹಲಕ್ಷ್ಮೀ ಅನುಷ್ಠಾನ ಕಾರ್ಯಕ್ರಮವನ್ನು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಉದ್ಘಾಟಿಸಿದರು. ಜುಬೇದಾ, ಉಮಾ, ರೀನಾ, ಮುನಾವರ್ ಪಾಷಾ, ಮುಕುಂದ ಇತರರಿದ್ದರು. 
ಜಿಲ್ಲೆ

ಕಾಂಗ್ರೆಸ್‌ನಿಂದ ಮಹಿಳಾ ಸಬಲೀಕರಣ ಗುರಿ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.

ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಸಿಡಿಪಿಒ ಇಲಾಖೆ ಆಶ್ರಯದಲ್ಲಿ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮೋಟಮ್ಮ ಸಚಿವೆಯಾಗಿದ್ದಾಗ ಸ್ತ್ರೀ ಶಕ್ತಿ ಗುಂಪು ಯೋಜನೆ ತಂದು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಈಗ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳಾ ಸಬಲೀಕರಣ ಮಾಡುತ್ತಿದೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, 2013ರಲ್ಲಿ ಸಿದ್ದರಾಮಯ್ಯ ಬಡವರ ಹಸಿವು ನೀಗಿಸುವ ಅನ್ನ ಭಾಗ್ಯಯೋಜನೆ ಜಾರಿಗೆ ತಂದಿದ್ದರು. ಈಗ ಅದರ ಮುಂದುವರಿದ ಭಾಗವಾಗಿ 10 ಕೆ.ಜಿ.ಅಕ್ಕಿ ಘೋಷಣೆ ಮಾಡಿ, 5 ಕೆ.ಜಿ.ಅಕ್ಕಿ ಬದಲಾಗಿ ಹಣವನ್ನು ಬಡವರ ಖಾತೆಗೆ ಹಾಕಲಾಗುತ್ತದೆ ಎಂದರು.
ಪಪಂ ಸದಸ್ಯೆ ಜುಬೇದಾ ಮಾತನಾಡಿ, ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕು ಎಂಬುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ ಎಂದು ಹೇಳಿದರು.
ಗೃಹಲಕ್ಷ್ಮೀ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮೀ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಪಪಂ ಸದಸ್ಯರಾದ ಮುನಾವರ್ ಪಾಷಾ, ಉಮಾ, ರೀನಾ, ಮಹಮ್ಮದ್ ವಸೀಂ, ಪಿ.ಜೆ.ಶೋಜ, ಮುಕುಂದ, ರೇಖಾ, ಕುಮಾರಸ್ವಾಮಿ, ಸುರಯ್ಯ ಭಾನು, ತಾಪಂ ಇಒ ಎಸ್.ನಯನಾ, ಬಿಇಒ ಕೆ.ಆರ್.ಪುಷ್ಪ್ಪಾ, ಮುಖಂಡರಾದ ಬಿಳಾಲುಮನೆ ಉಪೇಂದ್ರ, ಶಿವಣ್ಣ, ಪಪಂ ಮುಖ್ಯಾಧಿಕಾರಿ ಮಂಜುನಾಥ್ ಇದ್ದರು.