ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಹೊರ ವಲಯದ ರಸ್ತೆಯಲ್ಲಿ ಮಹಿಳೆಯರ ಕೊಲೆ ಮಾಡಿದ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು. 
ಜಿಲ್ಲೆ

ಮಹಿಳೆಯರಿಬ್ಬರ ಬರ್ಬರ ಹತ್ಯೆ

ಬೆಳಗಾವಿ: ಹಾಡುಹಗಲೇ ಐದು ತಿಂಗಳ ಗರ್ಭಿಣಿ ಹಾಗೂ ಮತ್ತೋರ್ವ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ.

ಮಚ್ಛೆ ಗ್ರಾಮದ ಲಕ್ಷ್ಮೀ ನಗರದ ಗರ್ಭಿಣಿ ರಾಜಶ್ರೀ ರವಿ ಬನ್ನಾರ್ (21), ರೋಹಿಣಿ ಗಂಗಪ್ಪ ಹುಲಮನಿ (21) ಕೊಲೆಯಾದ ಮಹಿಳೆಯರು.

ರಾಜಶ್ರೀ ಬನ್ನಾರ್ ಅವರು ಮೂಲತಃ ಶಿಂಧೊಳ್ಳಿ ಗ್ರಾಮದವರಾಗಿದ್ದು, ಸುಳಗಾ ಗ್ರಾಮದ ರೋಹಿಣಿ ಹುಲಮನಿ ಜತೆಗೂಡಿ ಮಚ್ಛೆ ಗ್ರಾಮದ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮಹಿಳೆಯರಿಬ್ಬರ ಪತಿಗಳು ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಮಚ್ಛೆ ಗ್ರಾಮದಲ್ಲಿ ಶನಿವಾರ ಮಹಿಳೆಯರಿಬ್ಬರೂ ರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಕಣ್ಣಿಗೆ ಮೆಣಸಿನಪುಡಿ ಎರಚಿ, ಚೂರಿಯಿಂದ ಇರಿದು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಹಿಳೆಯರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ತಿಳಿಸಿದ್ದಾರೆ.