ಸೊರಬ: ಮಹಾನ್ ತಪಸ್ವಿ ಸಿದ್ಧವೃಷಭೇಂದ್ರ ಶ್ರೀಗಳು ಸದಾ ಜಾಗೃತರಾಗಿರುವಂತೆ ಸಮಾಜಕ್ಕೆ ಇಂದಿಗೂ ಸಂದೇಶ ನೀಡುವ ಮಲೆನಾಡಿನ ನಿರ್ವಿಕಲ್ಪ ಸಮಾಧಿ ಸ್ಥಳ ಪುಣ್ಯಸ್ಥಳವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಡಾ. ಶ್ರೀ ಮಹಾಂತ ಸ್ವಾಮೀಜಿ ಅವರ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಮಂಟಪ ಪೂಜೆ, ಮಹಿಳಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಹಾಂತ ಸ್ವಾಮೀಜಿ ಅವರು ಜಡೆ ಮಠಕ್ಕೆ ಹೊಸ ಆಯಾಮ ನೀಡಿದ್ದಾರೆ. ಮಹಾಂತರು ಅಧ್ಯಯನ ಶೀಲರು, ಭಕ್ತರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಯೋಗದಲ್ಲಿ ಸಾಧನೆ ಮಾಡಿದ್ದಾರೆ. ಯೋಗ ಜೀವ, ಆತ್ಮಗಳನ್ನು ಸಂಪರ್ಕ ಮಾಡುವ ಸಾಧನವಾಗಿದೆ ಎಂದರು.
ಮಹಿಳೆಯರು ನಮ್ಮ ದೇಶದ ಸಂಸ್ಕೃತಿಯನ್ನು ರಕ್ಷಣೆ ಮಾಡುವಲ್ಲಿ ಮೊದಲಿಗರು. ಪ್ರತಿಯೊಬ್ಬರನ್ನು ಪ್ರಜ್ಞಾವಂತರನ್ನಾಗಿ ಮಾಡುವ ಶಕ್ತಿ ಅವರಿದೆ. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಇದರಲ್ಲಿ ಕೊರತೆಯಾದರೆ ಅಥವಾ ಪ್ರೋತ್ಸಾಹಿಸುವ ಕಾರಣದಿಂದ ಪರೋಕ್ಷವಾಗಿ ತಪ್ಪುದಾರಿಗೆ ಎಡೆಮಾಡಿ ಕೊಡುತ್ತದೆ. ಇದು ಭವಿಷ್ಯದಲ್ಲಿ ಮಾರಕವಾಗಲಿದೆ. ಮಹಿಳಾ ಸಬಲೀಕರಣ ಮೀಸಲಾತಿ ಇಲ್ಲದ ಸಂದರ್ಭದಲ್ಲೂ ಪ್ರಬುದ್ಧವಾಗಿ ಯೋಚಿಸಿದ ದಿನಗಳು ನಮ್ಮ ಮುಂದಿದೆ. ಆದಾಗ್ಯೂ ಗಂಡು, ಹೆಣ್ಣು ಎಂಬ ಭೇದ ನಮ್ಮಲ್ಲಿ ಏಕೆ. ಆತ್ಮ ಗಂಡು ಅಲ್ಲ. ಹೆಣ್ಣು ಅಲ್ಲ ಎನ್ನುವ ಅಲ್ಲಮಪ್ರಭು ಮಾತು ಅಂತರಂಗದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯಾಗಿದೆ. ಸೌಮ್ಯ ಸ್ವಭಾವದ ಕ್ರಿಯಾಶೀಲ ಮಹಾಂತರು ಇತರರಿಗೆ ಮಾದರಿಯಾಗಿದ್ದಾರೆ ಎಂದ ಶ್ರೀಗಳು, 1978ರಲ್ಲಿ ಜಡೆ ಮಠಕ್ಕೆ ಭೇಟಿ ನೀಡಿದ ದಿನಗಳನ್ನು ನೆನಪಿಸಿಕೊಂಡರು.
ಸುತ್ತೂರು ಶ್ರೀಗಳು ಡಾ. ಮಹಾಂತ ಸ್ವಾಮೀಜಿ, ರುದ್ರದೇವರನ್ನು ಸನ್ಮಾನಿಸಿದರು. ಶಿರಸಿಯ ನ್ಯಾಯವಾದಿ ಜ್ಯೋತಿಗೌಡ ಉಪನ್ಯಾಸ ನೀಡಿದರು. ಆನಂದಪುರದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀರಂಗಪಟ್ಟಣದ ಚಂದ್ರವನದ ಶ್ರೀ ತ್ರಿನೇತ್ರ ಸ್ವಾಮೀಜಿ, ಆಲಮಟ್ಟಿಯ ಹಿರೇಮಠದ ಶ್ರೀ ರುದ್ರಮುನಿ ಸ್ವಾಮೀಜಿ, ನವಿಲೂರಿನ ಶ್ರೀ ಚನ್ನಬಸವ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಸದಾನಂದಗೌಡ ಬಿಳಗಲಿ, ಈಡಿಗ ಸಮಾಜದ ಅಧ್ಯಕ್ಷ ಎಚ್.ಗಣಪತಿ, ಬಸವನ ಗೌಡ ಭಾರಂಗಿ, ಶಿವಪ್ರಸಾದ, ಸುಧಾ, ಮಮತಾ, ಸುಮಾ ಇತರರಿದ್ದರು.