ಹುಬ್ಬಳ್ಳಿ: ಮಹಿಳೆಯರು ಈ ದೇಶದ ನಿಜವಾದ ಆಸ್ತಿ. ಬಹುರೂಪ ತಾಳುವ ಶಕ್ತಿ ಇರುವುದು ಕೇವಲ ಮಹಿಳೆಯರಿಗೆ ಮಾತ್ರ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಕ್ಷಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆಯ ವತಿಯಿಂದ ನವರಾತ್ರಿ ಹಾಗೂ ದಸರಾ ಉತ್ಸವ ನಿಮಿತ್ತ ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ಣ ಕುಂಭಮೇಳ ಕಾರ್ಯಕ್ರಮದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಿಳೆ ಸಹನೆ, ತಾಳ್ಮೆ, ಶಾಂತಿಯ ಸಂಕೇತ. ಆದಿಶಕ್ತಿ, ನವಶಕ್ತಿ, ದುರ್ಗಾಶಕ್ತಿಯ ರೂಪ ತಾಳಿ, ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿ ನಾಡಿನ ಜನತೆಯನ್ನು ಕಾಪಾಡುವ ಶಕ್ತಿ ಹೊಂದಿದ್ದಾಳೆ ಎಂದರು.
ಇದನ್ನು ಗಮನದಲ್ಲಿರಿಸಿಕೊಂಡೇ ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳಿಂದ ನಡೆಯುತ್ತಿದ್ದ ಮಹಿಳಾ ಮೀಸಲಾತಿಯ ಹೋರಾಟಕ್ಕೆ ಜಯ ತಂದುಕೊಡುತ್ತಿದ್ದಾರೆ. ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮೀಸಲಾತಿ ಜಾರಿಗೆ ತರುವ ಮೂಲಕ ಮಹಿಳಾ ಶಕ್ತಿಯ ಅನಾವರಣ ಮಾಡಿದ್ದಾರೆ. ಅವರ ದೂರದೃಷ್ಟಿಯಿಂದ ಇಂದು ಮಹಿಳೆಯರಿಗೆ ನಿಜವಾದ ಸ್ಥಾನಮಾನ ದೊರೆಯುವಂತಾಗಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕುಂಭಮೇಳದಲ್ಲಿ 2 ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಮಹಿಳಾ ಶಕ್ತಿಯ ಅನಾವರಣವಾಗಿದೆ. ಮಹಿಳೆಯರು ಎಲ್ಲ ರಂಗದಲ್ಲೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಎಂದರು.
ಪಾಲಿಕೆ ಮೇಯರ್ ವೀಣಾ ಬರದ್ವಾಡ, ಉದ್ಯಮಿ ಗೋವಿಂದ ಜೋಶಿ, ಕೃಷ್ಣಾ ಗಂಡಗಾಳೇಕರ, ಶಿವಾನಂದ ಮುತ್ತಣ್ಣವರ, ಸೀಮಾ ಲದ್ವಾ, ಸಂಗೀತ ಬದ್ದಿ, ರವಿ ನಾಯಕ, ಪ್ರತಿಭಾ ಪವಾರ, ಲೀಲಾವತಿ ಪಾಸ್ತಿ, ಸುಮಾ ಶಿವನಗೌಡರ, ರಾಜು ಕಾಳೆ ಇತರರು ಇದ್ದರು.
ಕುಂಭಮೇಳ ಮೆರವಣಿಗೆ: ದಸರಾ ಹಬ್ಬದ ಅಂಗವಾಗಿ ಭಾನುವಾರ ಕ್ಷಮತಾ ಸೇವಾ ಸಂಘ ಹಾಗೂ ನವಯುಗ ಸಂಘಟನೆಯ ವತಿಯಿಂದ ಹುಬ್ಬಳ್ಳಿಯ ದಾಜಿಬಾನ ಪೇಟೆಯ ದುರ್ಗಾದೇವಿ ದೇವಸ್ಥಾನದಿಂದ ಮೂರುಸಾವಿರ ಮಠದವರೆಗೆ ಬೃಹತ್ ಕುಂಭಮೇಳ ಮೆರವಣಿಗೆ ಜರುಗಿತು. ಕುಂಭಮೇಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಎರಡು ಸಾವಿರಕ್ಕೂ ಅಧಿಕ ಮಹಿಳೆಯರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.