ಮೈಸೂರು: ವಿಶ್ವ ಅಮ್ಮಂದಿರ ದಿನಾಚರಣೆ ಅಂಗವಾಗಿ ವಿದ್ಯಾರಣ್ಯಪುರಂನ ವಾಸುದೇವ ಮಹಾರಾಜ್ ಫೌಂಡೇಷನ್‌ನಿಂದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕಿಯರಾದ ಎಸ್.ಅನು (ಸಮಾಜ ಸೇವೆ), ಹರ್ಷಿತಾ ಎಸ್.ಅಯ್ಯರ್ (ಶಿಕ್ಷಣ) ಅವರಿಗೆ ತಲಾ 5,000 ರೂ. ನಗದು, ಮಾತಾ ವಿಜಯಕುಮಾರಿ ವಿ.ರಾವ್ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.
ಸಂಸ್ಕೃತ ವಿದುಷಿ ಕೆ.ಲೀಲಾ ಪ್ರಕಾಶ್ ಸಾಧಕಿಯರಿಗೆ ಪ್ರಶಸ್ತಿ ಪದಾನ ಮಾಡಿ ಮಾತನಾಡಿ, ಇವತ್ತಿನ ಕಾಲಮಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಇಂದಿನ ಯುವ ಜನಾಂಗ ತಾವು ಪಡೆಯುತ್ತಿರುವಂತಹ ಶಿಕ್ಷಣ, ಜ್ಞಾನಾರ್ಜನೆ, ಭಾಷಾ ಮಾಧ್ಯಮಗಳ ಪ್ರಭಾವಕ್ಕೊಳಗಾಗಿ ನಮ್ಮ ಸಂಸ್ಕೃತಿಯನ್ನು ಕಡೆಗಣಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುರುಹಿರಿಯರಿಗೆ ಅದರಲ್ಲೂ ತಮ್ಮನ್ನು ಪೋಷಿಸಿದ ಮಾತಾಪಿತೃಗಳಿಗೆ ಗೌರವ ಕೊಡುವುದನ್ನು ಮರೆಯುವಂತಾಗಿದೆ. ಅದಕ್ಕೆ ಅಪವಾದವಾಗಿ ತಾಯಿ ದಿನದ ನೆನಪಿನಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಾಜ ಸೇವಕ ಕೆ.ರಘುರಾಂ ಅವರು, ಮಾತಾ ವಿಜಯಕುಮಾರಿ ವಿ.ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‌ಕುಮಾರ್, ಕಾಳಿದಾಸ ರಸ್ತೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಸಿಇಒ ಕೆ.ಆರ್.ಯೋಗಾನರಸಿಂಹನ್, ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿ.ನಾಗೇಂದ್ರಬಾಬು, ಸಂಚಾಲಕ ಚಕ್ರಪಾಣಿ ಇತರರು ಇದ್ದರು.