ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಂಗೆರೆಯ ಕಾಫಿತೋಟವೊಂದರ ಲೈನ್‌ಮನೆಯಲ್ಲಿ ವಾಸವಿದ್ದ ವಿವಾಹಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಹುಣಸೂರು ಮೂಲದವರು ಎನ್ನಲಾದ ಶಿವಮ್ಮ ಅಲಿಯಾಸ್ ಗೀತಾ(45) ಎಂಬಾಕೆಯ ಮೃತದೇಹ ಕಾಫಿತೋಟದ ಲೈನ್‌ಮನೆಯಲ್ಲಿ ಮಂಗಳವಾರ ಪತ್ತೆಯಾಗಿದೆ. ಮಲ್ಲಂಗೆರೆಯ ಕುಪ್ಪಂಡ ಬೋಪಣ್ಣ ಗಣಪತಿ ಅವರ ಕಾಫಿತೋಟದ ಕೆಲಸಕ್ಕೆಂದು ಕಳೆದ ನಾಲ್ಕೈದು ದಿನಗಳ ಹಿಂದೆ ಶಿವಮ್ಮ ಮತ್ತು ಆಕೆಯ ಪತಿ ಶಿವಪ್ಪ ಬಂದಿದ್ದರು. ತೋಟದ ಲೈನ್‌ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಲೈನ್‌ಮನೆಯಲ್ಲಿ ಶಿವಮ್ಮಳ ಮೃತದೇಹ ಪತ್ತೆಯಾಗಿದ್ದು, ಪತಿಯೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಬಾಳೆಲೆ ಉಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ವಿರಾಜಪೇಟೆ ಡಿವೈಎಸ್ಪಿ ಗಂಗಾಧರಪ್ಪ, ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಮುಂದೋಳ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದರು. ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.