ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸೌಟು ಹಿಡಿಯುವ ಕೈ ನೇಗಿಲು ಹಿಡಿಯಲೂ ಸೈ ಎಂಬಂತೆ ಹೆಣ್ಣುಮಗಳೊಬ್ಬಳು ಕೃಷಿಯಲ್ಲಿ ಸಾಧನೆಯ ಮೆಟ್ಟಿಲು ಏರಿದ್ದು, ಮಾದರಿ ರೈತ ಮಹಿಳೆಯಾಗಿ ಗುರ್ತಿಸಿಕೊಂಡಿದ್ದಾರೆ.
ಮಹಿಳೆ ಮನಸ್ಸು ಮಾಡಿದರೆ ಸಾಧನೆಯ ಮೆಟ್ಟಿಲು ಏರಿ ಸಂಸಾರದ ನೊಗವನ್ನು ಯಶಸ್ವಿಯಾಗಿ ಎಳೆಯಬಲ್ಲಳು ಎಂಬುದಕ್ಕೆ ಸಾಯಾಗಿ ನಿಂತಿದ್ದಾರೆ. ರಾಮನಗರ ತಾಲೂಕಿನ ಕಸಬಾ ಹೋಬಳಿಯ ಕಗ್ಗಲಹಳ್ಳಿ ಗ್ರಾಮದ ಶಾಂತಮ್ಮ.
ಶಾಂತಮ್ಮ ಯಶಸ್ವಿ ಕೃಷಿಕರಾಗುತ್ತೇವೆ ಎಂದು ಕನಸು ಕಂಡವರಲ್ಲ, ಪತಿ ಹಾಸಿಗೆ ಹಿಡಿದಾಗ ಇಬ್ಬರು ಮಕ್ಕಳ ಜತೆಗೆ ಸಂಸಾರ ಇವರ ಮೇಲೆ ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಅಂಜದೆ ಕಳೆದ ಐದು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡು 6 ಎಕರೆ ಜಮೀನಿನಲ್ಲಿ ಸಮಗ್ರ ಬೇಸಾಯ ಮಾಡುವ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಟ್ರ್ಯಾಕ್ಟರ್ ಸ್ಟೇರಿಂಗ್, ಗುದ್ದಲಿ, ಕುಡುಗೋಲು ಹಿಡಿದು ತಾವೇ ಸ್ವತಃ ಕೃಷಿಗೆ ಇಳಿದರು. ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿದ್ದ ಶಾಂತಮ್ಮ ಒಂದಷ್ಟು ಯಶಸ್ವಿ ರೈತರ ಉತ್ತಮ ಸಹಕಾರ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೇಷ್ಮೆ, ಹೈನುಗಾರಿಕೆ, ಮೇಕೆ, ನಾಟಿ ಕೋಳಿ, ಜೇನು ಸಾಕಾಣಿಕೆ ನಡೆಸುತ್ತಿದ್ದಾರೆ. ಇವರು ಪಪ್ಪಾಯ ತೋಟ, ಬಾಳೆ, ತೆಂಗು, ಅಡಕೆ, ಮಾವು ಕೃಷಿ ಅವಲಂಬಿಸಿದ್ದಾರೆ. ತರಕಾರಿ ಬೆಳೆ ಏಕಬೆಳೆಗೆ ಅವಲಂಬಿತವಾಗದೆ ಮಿಶ್ರ ಬೇಸಾಯ ಪದ್ಧತಿಯಿಂದ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆದುಕೊಂಡಿದ್ದಾರೆ.
ಭೂಮಿ ಉಳುಮೆ, ಕಳೆ ತೆಗೆಯುವುದು, ತೋಟಗಳ ನಿರ್ವಹಣೆ ಔಷಧ ಸಿಂಪಡಣೆ, ರೇಷ್ಮೆ, ತರಕಾರಿ ಮಾರುಕಟ್ಟೆಗೆ ಹೋಗಿ ಬರುವುದು, ಬೆಳೆಗಳಿಗೆ ನೀರುಣಿಸುವುದು, ರೇಷ್ಮೆ ಬೆಳೆಗೆ ಸೊಪ್ಪು ಕೊಯ್ಲು ಮಾಡಿ ತರುವುದು ಹೀಗೆ... ಬಿಡುವಿಲ್ಲದೆ ಕೆಲಸ ಮಾಡುತ್ತಾ ಕೂಲಿ ಕಾರ್ಮಿಕರ ಕೊರತೆ ನೀಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಕಾಣುವುದಿಲ್ಲ ಎಂದು ತಾವೇ ಸ್ವತಃ ಬೆಳೆದ ಫಸಲು ಮಾರಾಟ ಮಾಡಿ ಮಾರುಕಟ್ಟೆಗಿಂತ ಹೆಚ್ಚಿನ ಲಾಭ ಕಂಡುಕೊಂಡಿದ್ದಾರೆ. ಜೇನು ಕೃಷಿಗೂ ಕೈ ಹಾಕಿರುವ ಇವರು ಎಲ್ಲ ಜಾತಿಯ ತೋಟದ ಬೆಳೆಯಲ್ಲಿ ಹಣ್ಣಿನ ಗಿಡ ಬೆಳೆಸುತ್ತಿದ್ದಾರೆ. ನೀರಾವರಿ ಕೃಷಿ ಅವಲಂಬಿಸಿಕೊಂಡಿರುವ ಇವರು ಕೃಷಿಹೊಂಡ ನಿರ್ಮಿಸಿಕೊಂಡು ವಿದ್ಯುತ್ ಇದ್ದಾಗ ಕೃಷಿ ಹೊಂಡಕ್ಕೆ ನೀರು ತುಂಬಿಕೊಂಡು ವಿದ್ಯುತ್ ಆಸರೆ ಇಲ್ಲದೆ ಕೃಷಿಹೊಂಡದ ನೀರನ್ನು ಜಮೀನಿಗೆ ಹರಿಸುವ ಮೂಲಕ ಉಳಿತಾಯ ಕೂಡ ಕಂಡುಕೊಂಡಿದ್ದಾರೆ. ವಾರ್ಷಿಕ ಆದಾಯ ಎರಡರಿಂದ ಮೂರು ಲಕ್ಷ ರೂ. ಆಗಿದೆ ಎನ್ನುತ್ತಾರೆ.
ಪ್ರಶಸ್ತಿ: ನ.17 ರಂದು ಬೆಂಗಳೂರಿನ ಹೆಬ್ಬಾಳದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಜಿಲ್ಲಾಮಟ್ಟದ ಕೃಷಿ ಪ್ರಶಸ್ತಿಗೂ ಶಾಂತಮ್ಮ ಭಾಜನರಾಗುತ್ತಿದ್ದಾರೆ. ಜತೆಗೆ ಈಗಾಗಲೆ ಕಳೆದ ವರ್ಷ ಬೆಂಗಳೂರಿನ ಕೃಷಿ ಮೇಳದಲ್ಲಿ 2022&23ನೇ ಸಾಲಿನ ತಾಲೂಕು ಮಟ್ಟದ ಪ್ರಗತಿಪರ ರೈತ ಮಹಿಳೆ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಶ್ರೇಷ್ಠ ತೋಟಗಾರಿಕಾ ರೈತ ಮಹಿಳೆ ಪ್ರಶಸ್ತಿ ನೀಡಿದೆ.
ಶಾಂತಮ್ಮ, ಯಶಸ್ವಿ ರೈತ ಮಹಿಳೆ, ಕಗ್ಗಲಹಳ್ಳಿ