ಮಂಡ್ಯ: ತೆಗೆದುಕೊಂಡಿದ್ದ ಸಾಲವನ್ನು ತೀರಿಸಲು ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ತೀವ್ರ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದ ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಗ್ರಾಮದ ಪ್ರೇಮಾ(59) ಮೃತರು. ಈಕೆ ಚನ್ನಪಟ್ಟಣದ ಖಾಸಗಿ ಬ್ಯಾಂಕ್‌ನಿಂದ 2018ರಲ್ಲಿ ಮನೆ ಅಡವಿಟ್ಟು 6 ಲಕ್ಷ ರೂ ಸಾಲ ಪಡೆದಿದ್ದರು. ಇದಕ್ಕೆ ಪ್ರತಿ ತಿಂಗಳು 10,700 ರೂ. ಕಂತು ಪಾವತಿಸಬೇಕಿತ್ತು. ಅದರಂತೆ ಕೋವಿಡ್ ಸೇರಿದಂತೆ ಪ್ರತಿ ತಿಂಗಳು ಸಕಾಲಕ್ಕೆ ಕಂತು ಪಾವತಿಸಿಕೊಂಡು ಬಂದಿದ್ದಾರೆ. ಇತ್ತ ಕುಟುಂಬದ ನಿರ್ವಹಣೆ ಹಾಗೂ ಮಗನ ಚಿಕಿತ್ಸೆಗೆಂದು 5ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದರೆನ್ನಲಾಗಿದೆ.
ಇನ್ನು ಬ್ಯಾಂಕ್‌ನಲ್ಲಿ ತೆಗೆದುಕೊಂಡಿದ್ದ ಸಾಲಕ್ಕೆ ಸಂಬಂಧಿಸಿದಂತೆ ಮೂರು ತಿಂಗಳು ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಂದೆಡೆ ಬ್ಯಾಂಕ್‌ನ ಸಿಬ್ಬಂದಿ ಮನೆ ಖಾಲಿ ಮಾಡಬೇಕೆಂದು ಬೆದರಿಕೆ ಹಾಕಿದ್ದರು. ಮಾತ್ರವಲ್ಲದೆ ಮನೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ಮೈಕ್ರೋ ಫೈನಾನ್ಸ್‌ನ ಸಿಬ್ಬಂದಿ ಕೂಡ ಸಾಲ ಪಾವತಿಸುವಂತೆ ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದಿದ್ದ ಪ್ರೇಮಾ ಮಂಗಳವಾರ ಮನೆಯಲ್ಲಿಯೇ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಮಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿತ್ತಾದರೂ ಬುಧವಾರ ಸಾವನ್ನಪ್ಪಿದ್ದಾರೆ. ಮಿಮ್ಸ್‌ನ ಶವಾಗಾರದ ಎದುರು ಪ್ರೇಮಾ ಅವರ ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು. ರೈತ ಯುವ ನಾಯಕ ಪಚ್ಚೆ ನಂಜುಂಡಸ್ವಾಮಿ ಸೇರಿದಂತೆ ರೈತ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು. ಬ್ಯಾಂಕ್ ಮತ್ತು ಫೈನಾನ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಯಿ ಸಾವಿಗೆ ಬ್ಯಾಂಕ್ ಕಾರಣ: ನಮ್ಮ ತಾಯಿ ಸಾವಿಗೆ ಬ್ಯಾಂಕ್ ಅಧಿಕಾರಿಗಳೇ ಕಾರಣ ಎಂದು ಪ್ರೇಮಾ ಅವರ ಮಗಳು ಮಾಣಿಕ್ಯ ಆರೋಪಿಸಿದರು. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂಪಾಯಿ ವಾಪಸ್ ಪಾವತಿಸಿದ್ದಾರೆ. ಕಟ್ಟಿರುವ ಹಣವನ್ನು ಬಡ್ಡಿಗೆ ಜಮ ಮಾಡಿಕೊಳ್ಳಲಾಗಿದೆ. ಈಗ ಇನ್ನೂ 6 ಲಕ್ಷ ರೂ. ಕಟ್ಟಿ ಅಂತಾ ಹಿಂಸೆ ಕೊಡುತ್ತಿದ್ದರು. ಮನೆ ಹತ್ತಿರ ಬಂದು ಗಲಾಟೆ ಮಾಡಿದಲ್ಲದೆ, ಮನೆ ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಮನನೊಂದು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದಾರೆ. ಈಗ ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡರು.