ಜಿಲ್ಲೆ

ನೇತ್ರಾವತಿ ಬ್ರಿಜ್‌ ಬೇಲಿ ಮೇಲಿಂದ ಕಸ ಎಸೆದು ಸಾಧನೆ ಮೆರೆದ ಮಹಿಳೆ!

ಮಂಗಳೂರು: ಮಂಗಳೂರು ಹೊರವಲಯದ ನೇತ್ರಾವತಿ ನದಿಯ ಹೊಸ ಸೇತುವೆ ಹಾಗೂ ಹಳೇ ಸೇತುವೆ ಎರಡರ ಇಕ್ಕೆಲಗಳಲ್ಲೂ ಜನರು ಆತ್ಮಹತ್ಯೆಗೆ ಯತ್ನಿಸದಂತೆ ಎತ್ತರದ ಕಬ್ಬಿಣದ ತಂತಿ ಬೇಲಿಯೇನೋ ಹಾಕಿದ್ದಾರೆ. ಆದರೆ ಕಸ ಎಸೆಯುವವರಿಗಂತೂ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.

ಕೆಂಪುಕಾರಿನಲ್ಲಿ ಬಂದ ಮಹಿಳೆಯೊಬ್ಬರು ತನ್ನೆಲ್ಲಾ ಶಕ್ತಿ ಉಪಯೋಗಿಸಿ ಕಸ ಕಟ್ಟಿರುವ ಪ್ಲಾಸ್ಟಿಕ್‌ ಚೀಲವೊಂದನ್ನು ಬೀಸಿ ನೇತ್ರಾವತಿ ನದಿಗೆ ಎಸೆಯುತ್ತಿರುವ ದೃಶ್ಯವನ್ನು ಯಾರೋ ಹಿಂದಿನ ವಾಹನದಲ್ಲಿ ಕುಳಿತು ಚಿತ್ರೀಕರಿಸಿದ್ದು ಶನಿವಾರ ವೈರಲ್‌ ಆಗಿದೆ. ಕೆಎ 03 ಎನ್‌ಬಿ 4648 ನೋಂದಣಿಯ ಕೆಂಪು ಕಾರೊಂದು ನೇತ್ರಾವತಿ ಸೇತುವೆಯಲ್ಲಿ ನಿಲ್ಲಿಸಿದ್ದು ಅದರಿಂದ ಇಬ್ಬರು ಮಹಿಳೆಯರು ಕೆಳಗಿಳಿಯುತ್ತಾರೆ. ಅದರಲ್ಲೊಬ್ಬರು ಕೈನಲ್ಲಿ ಪ್ಲಾಸ್ಟಿಕ್‌ ಕಟ್ಟು ಹಿಡಿದಿದ್ದು ಅವರು ಎಸೆಯುವ ಕಟ್ಟು ಸೇತುವೆಯ ಬೇಲಿಯನ್ನೂ ದಾಟಿ ನೇತ್ರಾವತಿ ನದಿಯ ಪಾಲಾಗುತ್ತದೆ.

ಈ ವಿಡಿಯೊ ಬಗ್ಗೆ ನಾಗರಿಕರಲ್ಲಿ ಭಾರೀ ಆಕ್ರೋಶ ಮೂಡಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಕಸ ಎಸೆಯದಂತೆ ರಾಘವ ಕಾಂಚನ್‌ ಎಂಬವರು ಪ್ರತಿದಿನವೂ ಜಾಗೃತಿ ಮೂಡಿಸಿದ್ದರು. ಆದರೆ ಇಷ್ಟೆಲ್ಲಾ ಜಾಗೃತಿ ಮೂಡಿಸುವಾಗಲೂ ಇಂತಹ ಪ್ರಭೃತಿಗಳು ನಮ್ಮ ನಡುವೆ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು