ಕೈವಾರ ಹೊರಠಾಣೆ ವ್ಯಾಪ್ತಿಯಲ್ಲಿ ಪ್ರಕರಣ- ಮಗ-ಸೊಸೆ ಕೆಲಸಕ್ಕೆ ಹೋಗಿದ್ದಾಗ ಕೃತ್ಯ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಕೈವಾರದ ಮುಖ್ಯರಸ್ತೆಯ ಸರ್ಕಾರಿ ಶಾಲೆ ಸಮೀಪದ ಮನೆಗೆ ಸೋಮವಾರ ಹಾಡಹಗಲೇ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ಕೈವಾರದ ನಿವೃತ್ತ ಸೆಕ್ರೆಟರಿ ಲೇಟ್ ಗೋವಿಂದಪ್ಪ ಅವರ ಪತ್ನಿ ಲಲಿತಮ್ಮ(70) ಕೊಲೆಯಾದವರು. ಪತಿಉದ್ಯೋಗದಲ್ಲಿದ್ದಾಗಲೇ ಮೃತಪಟ್ಟಿದ್ದರಿಂದ ಅನುಕಂಪದ ಆಧಾರದ ಮೇಲೆ ಮಗ ಅಮರೇಂದ್ರ ಅವರಿಗೆ ಉದ್ಯೋಗ ದೊರೆತಿದ್ದು, ತಾಯಿ, ಮಗ ಒಟ್ಟಿಗೆ ವಾಸಿಸುತ್ತಿದ್ದರು. ಅಮರೇಂದ್ರ ಶಿಡ್ಲಘಟ್ಟ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಆರ್‌ಐ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈತನ ಪತ್ನಿ ಸುಧಾ ಮನೆಯ ಸಮೀಪದ ಸರ್ಕಾರಿ ಶಾಲೆಯಲ್ಲಿ ನೌಕರಿ ಮಾಡುತ್ತಿದ್ದಾರೆ.
ಎಂದಿನಂತೆ ಸೋಮವಾರ ಮಗ ಮತ್ತು ಸೊಸೆ ಇಬ್ಬರು ಕೆಲಸಕ್ಕೆ ಹೋಗಿದ್ದು, ಲಲಿತಮ್ಮ ಒಬ್ಬರೇ ಮನೆಯಲ್ಲಿ ವಾಸವಿದ್ದರು. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದ ಸೊಸೆ ಸುಧಾ ಮಧ್ಯಾಹ್ನ 1.30ರ ಸಮಯದಲ್ಲಿ ಮನೆಗೆ ಊಟ ಮಾಡಲು ಬಂದಾಗ ಅತ್ತೆ ಲಲಿತಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕಿರುಚಿಕೊಂಡಿದ್ದಾಳೆ. ತಕ್ಷಣ ಸಮೀಪದ ನಿವಾಸಿಗಳು ಸಮೀಪದಲ್ಲಿಯೇ ಇದ್ದ ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಕರೆತಂದು ವೈದ್ಯಕೀಯ ತಪಾಸಣೆ ಮಾಡಿಸುವ ವೇಳೆಗೆ ಮಹಿಳೆ ಮೃತಪಟ್ಟಿದ್ದಳು.
ವಿಷಯ ತಿಳಿದ ಕೈವಾರ ಹೊರಠಾಣೆ ಎಎಸ್‌ಐ ಪ್ರಕಾಶ್, ಚಿಂತಾಮಣಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವರಾಜ್, ಎಸ್‌ಪಿ ಕುಶಾಲ್‌ಚೌಕ್ಸೆ, ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ವಿಜಿಕುಮಾರ್, ಡಿವೈಎಸ್‌ಪಿ ಪಿ.ಮುರಳೀಧರ್, ಅಡಿಷನಲ್ ಎಸ್‌ಪಿ ರಜಾಕ್ ಇಮಾಮ್ ಖಾಸಿಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀಘ್ರ ಆರೋಪಿಗಳ ಪತ್ತೆ
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ. ಕುಶಾಲ್‌ಚೌಕ್ಸೆ, 65 ರಿಂದ 70 ವರ್ಷ ವಯಸ್ಸಿನ ಮಹಿಳೆಯ ಕೊಲೆಯಾಗಿದೆ. ಘಟನೆಗೆ ಕಾರಣ ಏನು, ಯಾರು ಕೃತ್ಯ ಎಸಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ. ಪೊಲೀಸ್ ಅಧಿಕಾರಿಗಳು ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸಲಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದರು.