ಜಿಲ್ಲೆ

ಮಹಿಳೆ ಜಗತ್ತಿನ ಅಮೂಲ್ಯ ಸೃಷ್ಟಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳೆ ಜಗತ್ತಿನ ಅಮೂಲ್ಯ ಸೃಷ್ಟಿ. ಸಹನಶೀಲ ಗುಣವೇ ಅವಳ ನೆಮ್ಮದಿಯ ಜೀವನದ ಜೀವಾಳ ಎಂದು ವಿಶ್ರಾಂತ ಪ್ರಾಚಾರ್ಯೆ ಡಾ. ಚಿತ್ರಾ ನಾಯಕ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಸರಸ್ವತಿ ನಾಗಪ್ಪ ನಾಗಜ್ಜನವರ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಸಹನಶೀಲತೆ ಕುರಿತು ಉಪನ್ಯಾಸ ನೀಡಿದರು.

ಮಹಿಳೆಯರು ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ತಾಳ್ಮೆ ಗುಣ ಹೊಂದಿದ್ದಾರೆ. ಅವಳು ಭೂಮಿಯಷ್ಟೇ ಸಹನಶೀಲತೆ ಉಳ್ಳವಳು. ಮಮತೆಯ ಸ್ವರೂಪದ ಮಹಿಳೆಯರು ದೃಢ ಹೃದಯಿಗಳು ಮಾತ್ರವಲ್ಲ ಆಶಾವಾದಿಗಳೂ ಹೌದು. ಎಂಥಹ ಒತ್ತಡದ ಬದುಕಿನಲ್ಲೂ ಮೌನಿಯಾಗಿ ಪರಿಸ್ಥಿತಿ ನಿಭಾಯಿಸುವ ಶಕ್ತಿ ಅವರಿಗೆ ಮಾತ್ರ ಇದೆ ಎಂದರು.

ಸೀತಾ ಛಪ್ಪರ ಮಾತನಾಡಿ, ಸರಸ್ವತಿ ನಾಗಜ್ಜನವರ ಆದರ್ಶ ಗೃಹಣಿಯಾಗಿ ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡಿದರು. ಎಲ್ಲರನ್ನೂ ಪ್ರೀತಿಸುವ ಗುಣವುಳ್ಳ ಔದಾರ್ಯತೆ ಅವರಲ್ಲಿತ್ತು. ಸಮಾಜ ಸೇವೆಯಲ್ಲಿ ಆತ್ಮತೃಪ್ತಿ ಹೊಂದಿದ ಅವರು ಮಹಿಳಾ ಸಂಘಟಕರೂ ಆಗಿದ್ದರು ಎಂದರು.

ದತ್ತಿದಾನಿ ಅರವಿಂದ ನಾಗಜ್ಜನವರ ದತ್ತಿ ಆಶಯ ಕುರಿತು ಮಾತನಾಡಿದರು. ರಾಜೇಶ್ವರಿ ನಾಗಜ್ಜನವರ, ಸನಾ, ಆರ್ಯನ್​, ವೀಣಾ ಸುರೇಶ, ಅಕ್ಕಮಹಾದೇವಿ ಸಂಕನಗೌಡ್ರ, ಇತರರು ಇದ್ದರು.

ಡಾ. ಆರ್​. ಸಿ. ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸುಧಾ ಕಬ್ಬೂರ ವಂದಿಸಿದರು.