ಜಿಲ್ಲೆ

ಕಾಡಾನೆ ದಾಳಿಗೆ ಮಹಿಳೆಗೆ ಗಾಯ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ : ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಶನಿವಾರ ಬೆಳ್ಳಂಬೆಳ್ಳಗೆ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಸ್ವ-ಗ್ರಾಮದಲ್ಲಿಯೇ ಕಾಡಾನೆಗಳ ದಾಳಿಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ತಾಲೂಕಿನ ಚಕ್ಕೆರೆ ಗ್ರಾಮದ ತಿಮ್ಮಮ್ಮ (60) ಗಾಯಗೊಂಡವರು. ಶನಿವಾರ ಬೆಳಗ್ಗೆ ಗ್ರಾಮದ ಸಮೀಪ ಬಹೀರ್ದೆಸೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ತಿಮ್ಮಮ್ಮಗೆ ಎರಡು ಆನೆಗಳು ಎದುರಾಗಿವೆ. ಕಾಡಾನೆಗಳನ್ನು ಕಂಡ ತಕ್ಷಣ ಗಾಬರಿಯಿಂದ ಚೀರಾಡಿದ್ದಾರೆ. ಈ ವೇಳೆ ಎರಡು ಆನೆಗಳ ಪೈಕಿ ಒಂದು ಆನೆ ಈಕೆಯತ್ತ ನುಗ್ಗಿ ಬಂದಿದೆ. ಹಠಾತ್ ದಾಳಿಯಿಂದ ಗಾಬರಿಗೊಂಡ ಇವರು, ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಮುಖ, ಕೈ ಸೇರಿ ಇತರೆ ಭಾಗಗಳಿಗೆ ಗಾಯಗಳಾಗಿದ್ದು, ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದ ಸಮೀಪವೇ ಕಾಡಾನೆಗಳು ಲಗ್ಗೆ ಇಟ್ಟಿರುವುದು ಚಕ್ಕೆರೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗ್ರಾಮದ ಹೊರ ವಲಯದ ಹಳ್ಳದಲ್ಲಿಯೇ ಈ ಎರಡು ಆನೆಗಳು ಕೆಲಕಾಲ ಬೀಡು ಬಿಟ್ಟಿದ್ದವು. ತದನಂತರ, ಕೂರಣಗೆರೆ ಅರಣ್ಯದತ್ತ ತೆರಳಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶನಿವಾರ ರಾತ್ರಿ ಈ ಎರಡು ಕಾಡಾನೆಗಳನ್ನು ಸ್ವಸ್ಥಾನಕ್ಕೆ ಮರಳಿಸುವ ಕಾರ್ಯಾಚರಣೆ ನಡೆಯಲಿದೆ.

ಎರಡು ಗಂಡಾನೆಗಳು ಕಬ್ಬಾಳು ಅರಣ್ಯ ಪ್ರದೇಶದಲ್ಲಿದ್ದವು. ಅಲ್ಲಿಂದ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಗೆ ತೆರಳುವ ವೇಳೆ ದಾರಿತಪ್ಪಿ ವಿರುಪಾಕ್ಷಿಪುರ, ಎಸ್.ಎಂ.ಹಳ್ಳಿ, ಮಳೂರುಪಟ್ಟಣ ಮಾರ್ಗವಾಗಿ ಚಕ್ಕೆರೆ ಗ್ರಾಮದ ಸಮೀಪ ಬಂದಿವೆ. ಸದ್ಯ ಇವು ಕೂರಣಗೆರೆ ಅರಣ್ಯದಲ್ಲಿವೆ. ಗಾಯಗೊಂಡಿರುವ ಮಹಿಳೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇವೆ. ಅವುಗಳನ್ನು ಸ್ವಸ್ಥಾನಕ್ಕೆ ಮರಳಿಸುವ ಕಾರ್ಯಾಚರಣೆ ಮಾಡುತ್ತೇವೆ. - ಮಲ್ಲೇಶ್, ವಲಯ ಅರಣ್ಯಾಧಿಕಾರಿ ಚನ್ನಪಟ್ಟಣ.