ಜಿಲ್ಲೆ

ಅಪಘಾತದಲ್ಲಿ ತಂದೆ, ಗಂಡ,  ಮಕ್ಕಳಿಬ್ಬರನ್ನು ಕಳೆದುಕೊಂಡು ನೋವು ಅನುಭವಿಸುತ್ತಿರುವ ಮಹಿಳೆ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಅನುಪಲ್ಲಿ ಬುರುಡುಗಂಟೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮಕ್ಕಳು ಸೇರಿದಂತೆ ನಾಲ್ವರು ಬಲಿಯಾದ ದುರ್ಘಟನೆಯಿಂದ ಗ್ರಾಮದಲ್ಲಿ ಸೂತಕ  ವಾತಾವರಣ ನಿರ್ಮಾಣವಾಗಿದ್ದು ಮೃತರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ತಂದೆ ವೆಂಕಟೇಶಪ್ಪ, ಗಂಡ ಬಾಲಾಜಿ, ಮಕ್ಕಳಿಬ್ಬರನ್ನು ಕಳೆದುಕೊಂಡು ಮಹಿಳೆ ಸ್ವಾತಿ ಅನಾಥರಾಗಿದ್ದಾರೆ. ನಮ್ಮವರಿಗೆ ಹೀಗೆ ಸಾವು ಬರುತ್ತೆ ಎಂದುಕೊಂಡಿರಲಿಲ್ಲ. ಎಲ್ಲರೂ ಒಮ್ಮೆಲೆ ಸತ್ತು ಬಿಟ್ಟು ಹೋಗಿದ್ದಾರೆ. ಇವರೊಂದಿಗೆ
ನಾನೂ ಹೋಗಬಾರದಿತ್ತೆ? ಎಂದು ಗೋಳಾಡುತ್ತಿದ್ದಾರೆ. ಬರ ಸಿಡಿಲಿನಂತೆ ಬಡಿದ ಅಘಾತದಿಂದ ದುಃಖಿತರಾಗಿದ್ದಾರೆ.
ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ನಿವಾಸಿ ಬಾಲಾಜಿಯನ್ನು ಚೇಳೂರು ತಾಲೂಕಿನ  ತಾಡಿಗೋಳು ಗ್ರಾಮದ ಸ್ವಾತಿ ಮದುವೆ ಮಾಡಿಕೊಂಡಿದ್ದು ಈ ದಂಪತಿಗೆ ಇಬ್ಬರು ಮಕ್ಕಳು. ಇದೀಗ ತಂದೆ ವೆಂಕಟೇಶಪ್ಪ ಜತೆಗೆ ಮಕ್ಕಳು, ಗಂಡ ಮೃತಪಟ್ಟಿದ್ದಾರೆ.

*ಭೀಕರ ಅಪಘಾತ
ಚಿಂತಾಮಣಿ ತಾಲೂಕಿನ ಅನುಪಲ್ಲಿ ಬುರುಡುಗಂಟೆ ಬಳಿ ದ್ವಿಚಕ್ರ ವಾಹನದಲ್ಲಿ ಮದುವೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲೂಕಿನ ಚಿಲಕಲನೇರ್ಪು ಗ್ರಾಮದ ಬಾಲಾಜಿ (೩೦ ವರ್ಷ). ಇವರ ಮಾವ ಕೋಲಾರದ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ಳ ಗ್ರಾಮದ ಟಿ.ಎನ್.ವೆಂಕಟೇಶಪ್ಪ (೫೫ ವರ್ಷ), ಬಾಲಾಜಿಯ ಮಕ್ಕಳಾದ ಹರೀಶ್ (೧೧ ವರ್ಷ)  ಮತ್ತು ಆರ್ಯ (೮ ವರ್ಷ) ಮೃತಪಟ್ಟಿದ್ದರು. ಮತ್ತೊಂದು ಮಗು ಶಿವಾನಿ (೬ ವರ್ಷ) ಬಚಾವ್ ಆಗಿದೆ.