ರಾಮನಗರ: ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಾದಿಡ್ಡಿ ಚಲಾಚಾಯಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರ ರಾಯರದೊಡ್ಡಿಯಲ್ಲಿ ಬುಧವಾರ ನಡೆದಿದೆ.
ಚನ್ನಮಾನಹಳ್ಳಿಯ ಪ್ರವೀಣ್ ಎಂಬಾತ ಕುಡಿದು ತನ್ನ ಎರಿಟಿಗಾ ಕಾರು ಚಾಲನೆ ಮಾಡುವ ವೇಳೆ ನಿಯಂತ್ರಣ ತಪ್ಪಿ ಮಾಗಡಿ ರಸ್ತೆಯಲ್ಲಿ ಬರುತ್ತಿದ್ದ ಬಸ್, ಆಟೋಗೆ ಡಿಕ್ಕಿಯೊಡೆದಿದ್ದಾನೆ. ಈ ವೇಳೆ ಆಟೋದಲ್ಲಿ ಇದ್ದ ತಾಲೂಕಿನ ಬಿಳಗುಂಬ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ ರೂಪ ಎನ್ನುವರು ಮೃತಪಟ್ಟಿದ್ದಾರೆ. ರೂಪ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೊಪ್ಪ ಹೋಬಳಿಯ ಅರಳೆಕೆರೆ ಗ್ರಾಮದವರು. ಆಟೋದಲ್ಲಿ ಇದ್ದ ಇತರೆ ಮೂರ‌್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಷ್ಟಕ್ಕೆ ಸುಮ್ಮನಾಗ ಈತ ರಾಯರ ದೊಡ್ಡಿ ವೃತ್ತದಿಂದ ರೋಟರಿ ವೃತ್ತಕ್ಕೆ ಕಾರು ತಿರುಗಿಸಿದ್ದಾನೆ. ಈ ವೇಳೆ ಅಂಗಡಿಯೊಂದಕ್ಕೆ ಕಾರು ನುಗ್ಗಿಸಿದ್ದಲ್ಲದೆ, ಬೈಕ್‌ಗಳ ಮೇಳೆ ಕಾರು ಚಲಾಯಿಸಿದ್ದಾನೆ. ಅಡ್ಡಾದಿಡ್ಡಿ ಕಾರು ಚಾಲನೆ ಮಾಡುವುದನ್ನು ಕಂಡ ಸಾರ್ವಜನಿಕರು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ಹೆಚ್ಚಿನ ಅನಾಹುತ ಸಂಭವಿಸಿಲ್ಲವಾದರೂ ಸಾರ್ವಜನಿಕರಲ್ಲಿ ಆತಂಕ ನಿರ್ಮಾಣವಾಗಿತ್ತು. ಕಾರು ನಿಲ್ಲಿಸಿದ ತಕ್ಷಣವೇ ಕಾರನ್ನು ಸುತ್ತುವರಿದ ಸ್ಥಳೀಯರು, ಪಾನಮತ್ತನಾಗಿ ನಿಲ್ಲಲೂ ಸಾಧ್ಯವಾಗದ ಪ್ರವೀಣ್‌ಗೆ ಧರ್ಮದೇಟು ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಆರೋಪಿ ಪ್ರವೀಣನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೋಯ್ದಿದ್ದಾರೆ.
ಆತಂಕ ಸೃಷ್ಠಿ : ಪ್ರವೀಣ್ ರಾಮನಗರ ಪ್ರತಿಷ್ಠಿತ ಶಾಲೆಯೊಂದರ ಮಾಲೀಕರ ಪುತ್ರನಾಗಿದ್ದು, ಕಳೆದ ಒಂದು ವರ್ಷದಿಂದ ಕುಡಿತದ ದಾಸನಾಗಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಡಿತ ಬಿಡಿಸುವ ಕೇಂದ್ರಕ್ಕೆ ಈತನನ್ನು ಸೇರಿಸಲಾಗಿದ್ದು, ಅಲ್ಲಿಂದ ಬಂದ ನಂತರ ಬುಧವಾರ ಮತ್ತೆ ಕುಡಿದಿದ್ದಾನೆ. ಆದರೆ ಈತ ಮಾಡಿದ ಅವಾಂತರ ರಾಮನಗರದ ರಾಯರದೊಡ್ಡಿ ವೃತ್ತ, ವಿವೇಕಾನಂದ ನಗರ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿತ್ತು.
ಘಟನೆಯಲ್ಲಿ ಒಂದು ಆಟೋ, ಒಂದು ಖಾಸಗಿ ಬಸ್, ಎರಡು ಬೈಕ್‌ಗಳು ಹಾಗೂ ಅಂಗಡಿಗಳು ಜಖಂಗೊಂಡಿವೆ. ಈ ಸಂಬಂಧ ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.