ಸುಳ್ಯ: ಆಲೆಟ್ಟಿ ಗ್ರಾಮದ ಕುದ್ಕುಳಿ ಎಂಬಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಬಿಸಿ ನೀರು ಮೈಮೇಲೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ.
ಆಲೆಟ್ಟಿಯ ಕುದ್ಕುಳಿ ದಿ.ಸುಬ್ರಾಯ ಅವರ ಪುತ್ರಿ ರೇಖಾ(35) ಮೃತರು. ವಾರದ ಹಿಂದೆ ಮನೆಯಲ್ಲಿ ಅಡುಗೆ ಮಾಡಿ ಬಿಸಿ ನೀರಿನ ಪಾತ್ರೆಯನ್ನು ಒಲೆಯಿಂದ ತೆಗೆಯುತ್ತಿರುವ ಸಂದರ್ಭ ಕಾಲು ಜಾರಿ ಬಿದ್ದಾಗ ಪಾತ್ರೆಯಲ್ಲಿದ್ದ ಬಿಸಿ ನೀರು ಮೈಮೇಲೆ ಚೆಲ್ಲಿತ್ತು. ತಕ್ಷಣ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ.