ಜೊಯಿಡಾ: ತಮ್ಮನ ಹೆಂಡತಿಯನ್ನೇ ಗುದ್ದಲಿಯಿಂದ ಹೊಡೆದು ಸಾಯಿಸಿರುವ ಭೀಕರ ಘಟನೆ ತಾಲೂಕಿನ ಶಿಂಗರಗಾಂವ ಪಂಚಾಯಿತಿ ವ್ಯಾಪ್ತಿಯ ಆಮಶೇತಕೋಲೆಮಾಳ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಭಾಗ್ಯಶ್ರೀ ಸೋನು ವರಕ(35) ಕೊಲೆಯಾದ ಮಹಿಳೆ. ಈಕೆಯ ಭಾವ(ಗಂಡನ ಅಣ್ಣ) ಧೋಂಡು ಗಂಗಾರಾಮ ವರಕ(48) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಗುರುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಭಾಗ್ಯಶ್ರೀ ಕೆಲಸಕ್ಕೆ ತೆರಳುವೆ ವೇಳೆ ಹಿಂಬದಿಯಿಂದ ಬಂದ ಧೋಂಡು ಗುದ್ದಲಿಯಿಂದ ತಲೆಯ ಮೇಲೆ ಹೊಡೆದಿದ್ದಾನೆ. ಪರಿಣಾಮವಾಗಿ ಭಾಗ್ಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆರೋಪಿ ಪರಾರಿಯಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಭೇಟಿ ನೀಡಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಹಿರಿಯ ಅಧಿಕಾರಿಗಳ ದೌಡು: ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ದಾಂಡೇಲಿ ಡಿವೈಎಸ್‌ಪಿ ದಯಾನಂದ ಮದರಕಂಡಿ, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ, ರಾಮನಗರ ಪಿಎಸ್‌ಐ ಮಹಾಂತೇಶ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.