filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.5566667, 0.5566667); modeInfo: ; sceneMode: NightHDR; cct_value: 0; AI_Scene: (0, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಡೇರಿ ಗಲಾಟೆ ಮಹಿಳೆ ಆತ್ಮಹತ್ಯೆ ಯತ್ನ: ಮಿಮ್ಸ್‌ಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿಯ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಮಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅತ್ತ ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ದೇವರಾಜು ಎಂಬುವರ ಪತ್ನಿ ಮಂಜುಳಾ(48) ಆತ್ಮಹತ್ಯೆಗೆ ಯತ್ನಿಸಿ ಮಿಮ್ಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಿಮ್ಸ್‌ಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಏನಿದು ಘಟನೆ?: ಗ್ರಾಮದ ಡೇರಿಯ ಆಡಳಿತ ಮಂಡಳಿಯ ಮೊದಲ 15 ತಿಂಗಳಿಗೆ ಶ್ರುತಿ ಎಂಬುವರನ್ನು ಅಧ್ಯಕ್ಷರನ್ನಾಗಿ ಒಪ್ಪಂದದ ಮೇರೆಗೆ ಆಯ್ಕೆ ಮಾಡಲಾಗಿತ್ತು. ಅದರಂತೆ ಅವರ ಅವಧಿ ಮುಗಿದ ಬಳಿಕ ರಾಜೀನಾಮೆ ನೀಡಿದ್ದರು. ನಂತರ ಅಧ್ಯಕ್ಷರಾಗಿ ವೀಣಾ ಅವರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಇವರನ್ನು ಬಿಟ್ಟು ಬೇರೆಯವರು ಅಧ್ಯಕ್ಷರನ್ನಾಗಿ ಕೆಲವರು ಮಾಡಿಕೊಂಡರು. ಇದನ್ನು ಪ್ರಶ್ನಿಸಿ ಐವರು ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ನಡುವೆ ರಾಜೀನಾಮೆ ನೀಡಿದ್ದವರ ಪೈಕಿ ಒರ್ವ ನಿರ್ದೇಶಕರನ್ನು ತಮ್ಮ ಪರ ಸೆಳೆದುಕೊಂಡು ಬಲವಂತವಾಗಿ ರಾಜೀನಾಮೆ ಕೊಡಿಸಿದ್ದಾರೆಂಬಂತೆ ಹೇಳಿಕೆ ಕೊಡಿಸಿದ್ದರೆನ್ನುವ ಆರೋಪ ಕೇಳಿಬಂದಿದೆ. ಈ ವಿವಾದದ ಹಿನ್ನೆಲೆಯಲ್ಲಿ ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಆದರೆ ಸೋಮವಾರ ಅಧಿಕಾರಿಗಳು ಏಕಾಏಕಿ ಸಭೆ ನಡೆಸಲು ಮುಂದಾಗಿದ್ದಾರೆ. ಕೋರಂ ಇಲ್ಲದಿದ್ದರೂ ಸಭೆ ನಡೆಸಲು ಮುಂದಾದಾಗ ಅಸಮಾಧಾನಗೊಂಡ, ಇತರೆ ನಿರ್ದೇಶಕರು ಸದಸ್ಯರೊಡಗೂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ನಡುವೆ ಮಾತಿನ ಚಕಮಕಿ ನಡೆಯಿತು.

ವಿಷಯ ತಿಳಿದ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಪ್ರಸಾದ್‌ರಾವ್ ಅವರು, ಸ್ಥಳಕ್ಕೆ ಆಗಮಿಸಿದ್ದಾರೆ. ಮಾತ್ರವಲ್ಲದೆ ಸಭೆ ನಡೆಸಲು ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಆದೇಶವಾಗಿದೆ. ಅದರಂತೆ ಸಭೆ ನಡೆಸಿ ಎಂದು ತಿಳಿಸಿದ್ದಾರೆ. ಇದಕ್ಕೆ ನಿರ್ದೇಶಕರಾದ ವೀಣಾ ಮತ್ತು ಮಂಜುಳಾ ಅವರು ವಿರೋಧಿಸಿ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೂ ವೃತ್ತ ನಿರೀಕ್ಷಕ ಶಿವಪ್ರಸಾದ್ ರಾವ್ ಅವರು ಸಭೆ ನಡೆಸಲೇಬೇಕೆಂದು ಸಹಕಾರ ಸಂಘಗಳ ಅಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ. ಇದಕ್ಕೆ ಮಂಜುಳಾ ಅವರು ವಿರೋಧಿಸಿ ವಿಷ ಸೇವಿಸಿ ಅಸ್ವಸ್ಥರಾದರು. ತಕ್ಷಣ ಅವರನ್ನು ಮಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯಿಂದ ಗ್ರಾಮದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹುಲ್ಕೆರೆಕೊಪ್ಪಲಿನಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ತುಕಡಿ ನಿಯೋಜಿಸಲಾಗಿದೆ.

ಮಿತಿಮೀರಿದ ಶಾಸಕರ ದಬ್ಬಾಳಿಕೆ

ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರ ದಬ್ಬಾಳಿಕೆ ಮಿತಿಮೀರಿದೆ. ಹುಲ್ಕೆರೆ ಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಸಲು ಕೋರಂ ಅಭಾವವಿದೆ. ಆದಾಗ್ಯೂ ಚುನಾವಣೆ ನಡೆಸಲೇಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಕಾನೂನು ಚೌಕಟ್ಟು ಮೀರಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.

ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುಳಾ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ. ರಾಜಕೀಯ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಸಹಕಾರ ಸಂಘಗಳಲ್ಲೂ ರಾಜಕೀಯ ಒತ್ತಡ ತಂದು ಕುಟುಂಬಗಳನ್ನು ಹೊಡೆಯುವುದು ಸರಿಯಲ್ಲ. ಸರ್ಕಾರ ಏನು ಕೆಲಸ ಮಾಡುತ್ತದೆ ನೋಡೋಣ ಎಂದು ಇಷ್ಷು ದಿನ ಸುಮ್ಮನಿದ್ದೆವು. ಆದರೆ, ಪ್ರತಿಯೊಂದರಲ್ಲೂ ರಾಜಕೀಯ ತಂದು, ವಿಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಕೈಬಿಡಿಸುತ್ತಿದ್ದಾರೆ. ಇದು ಇದೇ ರೀತಿ ಮುಂದುವರಿದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಲ್ಲ ಕಡೆಯೂ ತಮ್ಮ ಪಕ್ಷದ ಬೆಂಬಲಿಗರೇ ಗೆಲ್ಲಬೇಕೆಂದು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ಮೂಲಕ ವಿಪಕ್ಷಗಳ ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಮಾಡಿಸುತ್ತಿದ್ದಾರೆ. ಇಂತಹ ಹೊಲಸು ರಾಜಕಾರಣವನ್ನು ಹಿಂದೆಂದೂ ನೋಡಿರಲಿಲ್ಲ ಎಂದರು.