ಜಿಲ್ಲೆ

ಮಹಿಳೆ, ಎರಡೂವರೆ ವರ್ಷದ ಮಗುವನ್ನು ತುಂಡರಿಸಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ದುಷ್ಕರ್ಮಿಗಳು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ನಡೆಯಿತೇ ಘೋರ ದುರಂತ?

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿಯ ಕೆರೆಯಲ್ಲಿ ಮಹಿಳೆ ಮತ್ತು ಮಗುವೊಂದನ್ನು ತುಂಡರಿಸಿ ಚೀಲದಲ್ಲಿ ಕಟ್ಟಿ ಕೆರೆಗೆ ಬಿಸಾಡಿರುವುದು ಮಂಗಳವಾರ ರಾತ್ರಿ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ಜಯಮ್ಮ (46), ಆಕೆಯ ಮೊಮ್ಮಗಳು ರಿಷಿಕಾ (2.6) ಕೊಲೆಯಾದವರು. ಜಯಮ್ಮ ಮಾ.12ರಂದು ಆದಿಚುಂಚನಗಿರಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದರು. ಆದಿಚುಂಚನಗಿರಿಯ ವ್ಯಕ್ತಿಯೊಬ್ಬರು ನನಗೆ ಹಣ ನೀಡಬೇಕಾಗಿದ್ದು, ಅವರಿಂದ ಹಣ ಪಡೆದು ಬರುವುದಾಗಿ ತಿಳಿಸಿ ಮನೆಯಿಂದ ಮೊಮ್ಮಗಳ ಜತೆ ಹೊರಟು ಬಂದಿದ್ದರು. ನಂತರ ಮಾ.18ರವರೆಗೂ ಮನೆಗೆ ಹಿಂದಿರುಗಿರಲಿಲ್ಲ. ಜಯಮ್ಮ ಅವರ ಮೊಬೈಲ್ ಫೋನ್ ಸ್ವೀಚ್‌ ಆಫ್ ಆಗಿತ್ತು. ಹೀಗಾಗಿ, ಜಯಮ್ಮ ಅವರ ಪುತ್ರ ಪ್ರವೀಣ್ ತಾಯಿ ಮತ್ತು ತನ್ನ ಪುತ್ರಿ ಕಾಣೆಯಾಗಿರುವುದಾಗಿ ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾ.18ರಂದು ಮಧ್ಯಾಹ್ನ ಪ್ರವೀಣ್ ಮೊಬೈಲ್‌ಗೆ ಕರೆ ಮಾಡಿದ ಶ್ರೀನಿವಾಸ ಎಂಬಾತ ಜಯಮ್ಮ ಮತ್ತು ರಿಷಿಕಾಳನ್ನು ಕೊಲೆ ಮಾಡಿ ಆದಿಚುಂಚನಗಿರಿ ಕಲ್ಯಾಣಿ ಬಳಿ ಇರುವ ಕೆರೆಗೆ ಚೀಲದಲ್ಲಿ ಕಟ್ಟಿ ಬಿಸಾಕಿರುವುದಾಗಿ ತಿಳಿಸಿ ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡಿದ್ದ.

ಪ್ರವೀಣ್ ಪೊಲೀಸರ ನೆರವಿನೊಂದಿಗೆ ಕೆರೆಗೆ ಬಂದು ಹುಡುಕಿದಾಗ ಚೀಲದಲ್ಲಿ ಕಟ್ಟಿರುವ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾದವು. ಮುಖದ ಗುರುತು ಸಿಗದಂತೆ ಆಯುಧದಿಂದ ಹೊಡೆದು ಜಯಮ್ಮ ಮತ್ತು ರಿಷಿಕಾಳನ್ನು ಕೊಲೆ ಮಾಡಲಾಗಿತ್ತು. ಸ್ಥಳಕ್ಕಾಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ತಿಮ್ಮಯ್ಯ, ಸಿಪಿಐ ಬಿ.ಆರ್. ಗೌಡ ಪರಿಶೀಲನೆ ನಡೆಸಿದರು.

ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.