ಖಾನಾಪುರ: ತಾಲೂಕಿನ ವಿಶ್ರಾಂತವಾಡಿ-ನಾಗುರ್ಡಾ ಗ್ರಾಮದ ರೇಖಾ ಉರ್ಫ್ ಮಲ್ಲವ್ವ ಶ್ರೀಕಾಂತ ಕುಂಬಾರ ಎಂಬ ಮಹಿಳೆ ಹಲವು ದಿನಗಳಿಂದ ವಿಶ್ರಾಂತವಾಡಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಮಾಟ-ಮಂತ್ರ, ವಶೀಕರಣ ಮತ್ತಿತರ ಮೂಢನಂಬಿಕೆ ಹಾಗೂ ಅಂಧಶ್ರದ್ಧೆ ಪಸರಿಸುವ ಕೃತ್ಯ ಮಾಡುತ್ತಿದ್ದಾಳೆ. ಮಹಿಳೆ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಬುಧವಾರ ತಹಸೀಲ್ದಾರ್, ಸಿಡಿಪಿಒ, ಪೊಲೀಸ್ ಉಪ ನಿರೀಕ್ಷಕ ಮತ್ತು ಪಿಡಿಒಗೆ ಮನವಿ ಸಲ್ಲಿಸಿದರು.
ಮಹಿಳೆ ತಾನು ಭೂತ-ದೆವ್ವ ಓಡಿಸುವುದಾಗಿ ಹಾಗೂ ತನ್ನ ಮೈಮೇಲೆ ದೇವರು ಬಂದು ಭವಿಷ್ಯ ಹೇಳುವುದಾಗಿ ಮುಗ್ಧ ಜನರನ್ನು ವಂಚಿಸುತ್ತಿದ್ದಾಳೆ. ವಿಶ್ರಾಂತವಾಡಿ ಗ್ರಾಮದ ಬೀದಿಗಳು ಮತ್ತು ರಸ್ತೆ, ಮನೆಗಳ ಮುಂದೆ ಮಾಟ-ಮಂತ್ರದ ವಸ್ತು ಎಸೆದು ಭಯ ಮೂಡಿಸುತ್ತಿದ್ದಾಳೆ. ತಡರಾತ್ರಿ ವಿಚಿತ್ರವಾಗಿ ಕೂಗಾಡುವ ಮೂಲಕ ಗ್ರಾಮಸ್ಥರ ನೆಮ್ಮದಿ ಹಾಳು ಮಾಡುತ್ತಿದ್ದಾಳೆ. ಹಿರಿಯರು ಬುದ್ಧಿ ಹೇಳಲು ಪ್ರಯತ್ನಿಸಿದ್ದು, ಅವರ ಮೇಲೆಯೇ ಮಾನಭಂಗದ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿದರು.
ತನ್ನ ಅಪ್ರಾಪ್ತ ಮಗನನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇಟ್ಟುಕೊಂಡು ಶಿಕ್ಷಣದಿಂದ ವಂಚಿತವಾಗುವಂತೆ ಮಾಡುತ್ತಿದ್ದಾಳೆ. ಮಹಿಳೆಯ ವರ್ತನೆ ವಿರುದ್ಧ ಗ್ರಾಮಸ್ಥರು ಹಾಗೂ ಪಂಚರು ರೋಸಿ ಹೋಗಿದ್ದು, ಆಕೆ ವಿರುದ್ಧ ಮೂಢನಂಬಿಕೆ ಹಾಗೂ ಅಂಧಶ್ರದ್ಧೆ ನಿರ್ಮೂಲನೆ ಕಾನೂನಿನಡಿ ಕ್ರಮ ಜರುಗಿಸಬೇಕು ಎಂದು ಕೋರಿದರು. ರಾಜು ಕುಂಬಾರ, ಸಂದೀಪ ಕುಂಬಾರ, ಉದಯಸಿಂಗ್ ಪಾಲ್ಕರ, ಜ್ಯೋತಿಬಾ ಚವ್ಹಾಣ, ಲಕ್ಷ್ಮಣ ಜುಂಜವಾಡಕರ ಇದ್ದರು.