ಜಿಲ್ಲೆ

ಮಹಿಳೆ ಸುಸ್ಥಿರ ಬದುಕು ಕಟ್ಟಿಕೊಳ್ಳಲಿ ; ಮಹಿಳಾ ದಿನಾಚರಣೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಸಲಹೆ

Tumakuru

ತುಮಕೂರು : ಲಿಂಗ ಅಸಮಾನತೆ ತೊಲಗಬೇಕಾದರೆ ಮಹಿಳೆ ಆರ್ಥಿಕವಾಗಿ ಸಬಲಳಾಗಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸ್ತ್ರೀಶಕ್ತಿ ಒಕ್ಕೂಟಗಳ ಸಹಯೋಗದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ದಿನಾಚರಣೆಯ ಗಂಧ-ಗಾಳಿಯೇ ತಿಳಿಯದ ಅಸಂಖ್ಯಾತ ಮಹಿಳೆಯರು ಹೊಲ-ಗದ್ದೆಗಳಲ್ಲಿ ಕೃಷಿ ಕಾರ್ಮಿಕರಾಗಿ ಬಿಸಿಲು ಮಳೆಯೆನ್ನದೇ ಶ್ರಮವನ್ನೆ ನಂಬಿ ಬದುಕುತ್ತಿದ್ದಾರೆ. ಮಹಿಳೆಯು ತನ್ನ ಆಸ್ತಿತ್ವವನ್ನು ಕಾಪಾಡಿಕೊಂಡು ಸುಸ್ಥಿರ ಬದುಕು ಕಟ್ಟಿಕೊಳ್ಳುವ ಕೆಲಸವಾಗಬೇಕು ಎಂದರು.

ಸಮಾಜದ ಎಲ್ಲ ಸ್ತರಗಳಲ್ಲಿಯೂ ಮಹಿಳೆಯು ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿದ್ದಾಳೆ. ಗ್ರಾಮೀಣ ಭಾಗಗಳಲ್ಲಿ ದೈಹಿಕ ದೌರ್ಜನ್ಯ, ನಗರಗಳಲ್ಲಿ ಮಾನಸಿಕ ದೌರ್ಜನ್ಯಗಳು ವರದಿಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಿಳೆ ಉನ್ನತ ಶಿಕ್ಷಣ ಪಡೆದು ಉದ್ಯೋಗ ಗಳಿಸಿ ಆರ್ಥಿಕವಾಗಿ ಸಬಲತೆಯನ್ನು ಸಾಧಿಸುವಂತಾಗಬೇಕು. ಸಮಾಜದ ಕಟ್ಟಕಡೆಯ ಮಹಿಳೆಯೂ ಮುಖ್ಯವಾಹಿನಿಗೆ ಬರುವಂತಾಗಬೇಕು. ಆ ಮೂಲಕ ಲಿಂಗ ಅಸಮಾನತೆ ತೊಲಗಿಸಬೇಕು ಎಂದರು.

ಲಿಂಗ ಸಮಾನತೆ ಸುಸ್ಥಿರ ನಾಳೆಗಾಗಿ ಎಂಬುದು ಈ ವರ್ಷದ ಮಹಿಳಾ ದಿನಾಚರಣೆಯ ಧೇಯವಾಕ್ಯವಾಗಿದ್ದು, ಎಲ್ಲರ ಬದುಕನ್ನು ಕಟ್ಟುವಲ್ಲಿ ಮಹಿಳೆ ಮಹತ್ವದ ಪಾತ್ರವಹಿಸುತ್ತಾಳೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾವಸಂತ ಮಾತನಾಡಿ, ಜಗತ್ತಿನ ಸ್ತ್ರೀ ಸಮಾನತೆ ಎಂಬುದು ರಾಜಕೀಯ ಹಕ್ಕೋತ್ತಾಯವಾಗಿದ್ದು, ಮಹಿಳೆಯರ ಭಾವನಾತ್ಮಕ ಸುಸ್ಥಿರತೆಯ ಬಗ್ಗೆ ಯೋಚಿಸುವ ಅಗತ್ಯವಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿದರು.

ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಎಂ.ಕೃಷಿಕ್, ಜಿ.ತೇಜಸ್, ಎಚ್.ಆರ್. ನೇಹಾ ಮತ್ತು ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ 10 ಮಂದಿಯನ್ನು ಸನ್ಮಾನಿಸಲಾಯಿತು. ಶಿಶು ಯೋಜನಾಭಿವೃದ್ಧಿ ಅಧಿಕಾರಿಗಳಾದ ಅಂಬಿಕಾ, ಅನಿತಾ, ಅನುಷಾ ಇದ್ದರು.

ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ : ಹೆಣ್ಣು ಮಕ್ಕಳನ್ನು 21ನೇ ವಯಸ್ಸಿಗೂ ಮುನ್ನ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಅರಿವಿದ್ದರೂ ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವ ಬಗ್ಗೆ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಆತಂಕ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿಗೆ ಮದುವೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆಯಲ್ಲದೇ ಅವರು ಜನನ ನೀಡುವ ಮಕ್ಕಳು ಅಪೌಷ್ಟಿಕತೆ ಸೇರಿ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಂದ ಬಳಲುವ ಸಾಧ್ಯತೆಯಿದೆ. ಮಹಿಳೆಯರು ಶೇ.18 ಉನ್ನತ ಶಿಕ್ಷಣ, ಶೇ.3 ರಾಜಕೀಯ ಪ್ರಾತಿನಿಧ್ಯ ಪಡೆದಿದ್ದು, ಇನ್ನೂ ಉನ್ನತ ಹಂತಕ್ಕೆ ತಲುಪುವ ಅಗತ್ಯವಿದೆ ಎಂದರು.