ತೇರದಾಳ: ಶೂನ್ಯ ಸಿಂಹನಾಧೀಶ್ವರ ಅಲ್ಲಮಪ್ರಭು ದೇವರ ನೂತನ ಕಟ್ಟಡ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಒಂದು ತಿಂಗಳ ಪರ‌್ಯಂತ ಪ್ರಭು ಪರಂಜ್ಯೋತಿ ಯಾತ್ರೆ ಅಂಗವಾಗಿ ಸೋಮವಾರ ಸಂಜೆ ಮಹಿಳೆಯರು ಶೇಂಗಾ ಹೋಳಿಗೆ ಬುಟ್ಟಿ ಹೊತ್ತು ಮೆರವಣಿಗೆ ನಡೆಸಿದರು.
ಡಾ.ಮಹಾಂತಪ್ರಭುಗಳ ಮಾರ್ಗದರ್ಶನದಂತೆ ತೇರದಾಳದ ಮನೆ ಮನಗಳಿಂದ ಶೇಂಗಾ ಹೋಳಿಗೆಯನ್ನು ತಾಯಂದಿರು ತಯಾರಿಸಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಸ್ಥಳೀಯ ನೀಲಕಂಠೇಶ್ವರ ಮಠದ ಆವರಣದಲ್ಲಿ ಜಮಾಯಿಸಿದರು. ಅಲ್ಲಿಂದ ಹೋಳಿಗೆ ಬುಟ್ಟಿಗಳನ್ನು ಹಾಗೂ ವಚನಗ್ರಂಥ ಕಟ್ಟುಗಳನ್ನು ತಾಯಂದಿರು ತಲೆ ಮೇಲೆ ಹೊತ್ತುಕೊಂಡು ಗುರು ಬಸವಲಿಂಗಾಯ ನಮಃ ಓಂ ಎಂಬ ಮಂತ್ರೋಚ್ಛಾರಣೆಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸಾಗಿದರು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಸೇರಿ ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಶ್ರೀಮಠದಿಂದ ಎಪಿಎಂಸಿ, ಡಚ್ ಕಾಲನಿ, ಪದ್ಮಾ ಆಸ್ಪತ್ರೆ, ನಿವರಗಿ ಟೆಕ್ಸ್‌ಟೈಲ್, ಮಹಾವೀರ ವತ್ತ, ಬಸ್ ನಿಲ್ದಾಣ, ಚಾವಡಿ ಕಚೇರಿ, ಹನುಮಾನ ದೇವಸ್ಥಾನ ವತ್ತ, ಅಲ್ಲಮಪ್ರಭು ದ್ವಾರಬಾಗಿಲು ಮಾರ್ಗವಾಗಿ ಅಲ್ಲಮಪ್ರಭು ದೇವಸ್ಥಾನದವರೆಗೆ ಜರುಗಿತು.
ಮೆರವಣಿಗೆಯಲ್ಲಿ ಝಾಂಜ್, ಹರಿಭಜನೆ ಸೇರಿ ವಿವಿಧ ವಾದ್ಯಮೇಳಗಳು ಮೇಳೈಸಿದವು.ಪಟ್ಟಣದಲ್ಲಿ ಅಲ್ಲಮಪ್ರಭು ಉತ್ಸವದ ಅಂಗವಾಗಿ ಸಮಸ್ತ ಭಕ್ತರು ಹಗಲಿರುಳು ಅಜ್ಜನ ಸೇವೆ ಮಾಡುತ್ತಿದ್ದು, ತೇರದಾಳ ಶರಣ ಇತಿಹಾಸದ ಪುಟ ಸೇರುವಂತೆ ವಿಜೃಂಭಣೆ ಕಾರ್ಯಕ್ರಮಗಳು ಶರಣ ಭಕ್ತಗಣಂಗಳಲ್ಲಿ ಮನ ತುಂಬಿಕೊಂಡಿವೆ.