ಬೆಂಗಳೂರು:ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ ಸಂಸ್ಥೆ ಸರಬರಾಜು ಮಾಡಿರುವ ಔಷಧಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಎಲ್ಲ ಔಷಧ ಉಗ್ರಾಣ ಪ್ರಭಾರಧಾರಕರಿಗೆ, ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮದ (ಕೆಎಸ್ಎಂಸಿಎಲ್) ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯತೆಯಲ್ಲಿ ನ.30ರಂದು ನಡೆದ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ, ಪಶ್ಚಿಮ ಬಂಗಾ ಸಂಸ್ಥೆಯವರು ಸರಬರಾಜು ಮಾಡಿರುವ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಅಡ್ಡ ಪರಿಣಾಮಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಸದರಿ ಔಷಧವನ್ನು ಹೆಚ್ಚಿನ ಗುಣಮಟ್ಟದ ವಿಶ್ಲೇಷಣೆಗೆ ಒಳಪಡಿಸಲು ಔಷಧ ನಿಯಂತ್ರಕರಿಗೆ ನಿರ್ದೇಶಿಸಿದ್ದರು. ಮುಖ್ಯಮಂತ್ರಿಗಳ ಆದೇಶದನ್ವಯ ಪಶ್ಚಿಮ ಬಂಗಾ ಸಂಸ್ಥೆಯವರು ಸರಬರಾಜು ಮಾಡಿರುವ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಎಲ್ಲಾ ಬ್ಯಾಚ್ಗಳನ್ನು ಮತ್ತೊಮ್ಮೆ ಔಷಧ ನಿಯಂತ್ರಕರ ಸಮನ್ವಯದೊಂದಿಗೆ ಗುಣವಿಶ್ಲೇಷಣೆಗೆ ಒಳಪಡಿಸಿ ವರದಿಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಪಶ್ಚಿಮ ಬಂಗಾ ಸಂಸ್ಥೆಯವರು ಕೆಎಸ್ಎಂಎಸ್ಸಿಎಲ್ಗೆ ಸರಬರಾಜು ಮಾಡುವ ಎಲ್ಲ ಔಷಧಗಳನ್ನು ಆಯಾ ಜಿಲ್ಲೆಗಳ ಸಹಾಯಕ ಔಷಧ ನಿಯಂತ್ರಕರಿಂದ ಗುಣಮಟ್ಟ ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಿ ವರದಿಗಳು ಬಂದ ನಂತರ, ಕೇಂದ್ರ ಕಚೇರಿಗೆ ಕಳುಹಿಸಿ ಔಷಧಗಳನ್ನು ಬಳಸುವ ಬಗ್ಗೆ ಮುಂದಿನ ಕ್ರಮವಹಿಸತಕ್ಕದ್ದು 'ಎಂದು ಕೆಎಸ್ಎಂಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಸೂಚಿಸಿದ್ದಾರೆ.