Withered district tourism! 
ಜಿಲ್ಲೆ

ಕಳೆಗುಂದಿದ ಜಿಲ್ಲಾ ಪ್ರವಾಸೋದ್ಯಮ!

ಪ್ರವಾಸಿ ತಾಣಗಳ ಅಭಿವೃದ್ಧಿಗಿಲ್ಲ ಅನುದಾನ

ಕೈಕಟ್ಟಿ ಕುಳಿತ ಇಲಾಖೆ

ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ ಬಿಡಿಗಾಸು ಸಿಗದೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.!
ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕೆಂಬ ದಶಕಗಳ ಕೂಗಿಗೆ ಯಾವ ಸರ್ಕಾರಗಳಿಂದಲೂ ಸೂಕ್ತ ಸ್ಪಂದನೆ ದೊರಕದ ಪರಿಣಾಮ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮಕಾಡೆ ಮಲಗಿದೆ.
ನಾಲ್ಕೂ ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಹಲವು ಐತಿಹಾಸಿಕ ತಾಣಗಳಿದ್ದರೂ ನಿರೀಕ್ಷಿತ ಅಭಿವೃದ್ಧಿ ಆಗದ ಕಾರಣದಿಂದ ಸೊರಗಿದ್ದು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನೇಪಥ್ಯಕ್ಕೆ ಸರಿದಿದೆ. ಇಲಾಖೆಯು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಅನುದಾನ ನೀಡುವಲ್ಲಿ ಮೀನಮೇಷ ಎಣಿಸುತ್ತಿರುವುದರಿಂದ ಅಧಿಕಾರಿಗಳೂ ಮೌನಕ್ಕೆ ಜಾರಿದ್ದಾರೆ.

ತೋರಿಕೆಯ ದಿನಾಚರಣೆ: ಪ್ರತಿ ವರ್ಷ ಜಿಲ್ಲೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದ್ದರೂ ಅದು ತೋರಿಕೆಗೆ ಸೀಮಿತವಾಗಿದೆ. ಜಾಥಾ ನಡೆಸುವುದು, ಜನಪ್ರತಿನಿಧಿಗಳು ಭಾಷಣ ಬಿಗಿಯುವುದು, ಅಧಿಕಾರಿಗಳು ಚಪ್ಪಾಳೆ ತಟ್ಟುವುದು. ಇಷ್ಟಕ್ಕೆ ಸೀಮಿತವಾಗಿದೆಯೇ ಹೊರತು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ಕಾಯಕಲ್ಪ ಕಲ್ಪಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.

ಬಗೆಹರಿಯದ ‘ಚಪ್ಪರದಕಲ್ಲು’ ಜಾಗ ವಿವಾದ: ಜಿಲ್ಲೆಯ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನದ ಕಣ್ಣಳತೆಯಲ್ಲಿಯೇ ಇರುವ ಐತಿಹಾಸಿಕ ತಾಣ ‘ಚಪ್ಪರದಕಲ್ಲಿನ’ಅಭಿವೃದ್ಧಿಗೆ ಜಾಗದ ವಿಘ್ನ ಎದುರಾಗಿವೆ. ನೂರಾರು ವರ್ಷದಿಂದ ಮಳೆಗಾಳಿ ಬಿಸಿಲ ಹೊಡೆತಕ್ಕೆ ಎದೆಯೊಡ್ಡಿ ನಿಂತಿರುವ ಬೃಹತ್ ಐತಿಹಾಸಿಕ ಬಂಡೆ ವ್ಯಾಪ್ತಿಯ ಜಾಗವನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸುವ ಜಿಲ್ಲಾ ಪ್ರವಾಸೋಮದ್ಯದ ಕನಸು ಕೈಗೂಡುತ್ತಿಲ್ಲ. ಕುಂದಾಣ ಹೋಬಳಿಯಲ್ಲಿನ ‘ಚಪ್ಪರದಕಲ್ಲು’ ಎಂದೇ ಖ್ಯಾತಿಯಾಗಿರುವ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಇಲಾಖೆ ಮುಂದಾಗಿದ್ದರೂ ಬಗೆಹರಿಯದ ಜಾಗದ ವಿವಾದ ಮುಂದಿನ ಪ್ರಕ್ರಿಯೆಗಳಿಗೆ ಬ್ರೇಕ್ ಹಾಕಿದೆ.

ಪ್ರಾಚ್ಯವಸ್ತು ಸಂಗ್ರಹಾಲಯ ಕಣ್ತೆರೆಯುತ್ತಿಲ್ಲ: ದೇವನಹಳ್ಳಿಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ಮಾಣ ಹಗ್ಗಾಜಗ್ಗಾಟದಲ್ಲೇ ದಿನಕಳೆಯುತ್ತಿದೆ. ಹಳೇ ತಹಸೀಲ್ದಾರ್ ಕಚೇರಿ ಕಟ್ಟಡವನ್ನು ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ಹಸ್ತಾಂತರಿಸುವ ಸಂಬಂಧ ಜಿಲ್ಲಾಡಳಿತ ತಹಸೀಲ್ದಾರ್‌ಗೆ ಪತ್ರ ಬರೆದಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ದೇವನಹಳ್ಳಿಯ ಇತಿಹಾಸಕ್ಕೆ ಮತ್ತಷ್ಟು ಬೆಳಕು ಚೆಲ್ಲುವ ಜತೆಗೆ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗುತ್ತದೆ ಎಂದು ಜನರು ನಿರೀಕ್ಷೆಯಲ್ಲೇ ದಿನದೂಡುತ್ತಿದ್ದಾರೆ.

ಕುಂದಾಣ ಏಕಶಿಲಾ ಬೆಟ್ಟದ ಅನುದಾನಕ್ಕೆ ಕತ್ತರಿ: ಚಾರಣಿಗರ ಹಾಟ್ ೆವರೀಟ್ ಎನಿಸಿರುವ ಕುಂದಾಣ ಏಕಶಿಲಾ ಬೆಟ್ಟದ ಅಭಿವೃದ್ಧಿಗೆ ಮಂಜೂರಾಗಿದ್ದ ಅನುದಾನಕ್ಕೂ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ ಎನ್ನಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ 2.30 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಬೆಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಕೆಆರ್‌ಐಡಿಎಲ್ ಸಂಸ್ಥೆ ನೀಲಿನಕ್ಷೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲು ಮುಂದಾಗಿತ್ತು. ಆದರೆ ಈಗ ಯಾವುದೂ ಕೈಗೂಡಿಲ್ಲ.

ಅಮಾನಿಕೆರೆಗೆ ಮನ್ನಣೆ ಸಿಕ್ಕಿಲ್ಲ: ಹೊಸಕೋಟೆಯ ದೊಡ್ಡ ಅಮಾನಿದೊಡ್ಡಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲು ಎಲ್ಲ ಅರ್ಹತೆ ಹೊಂದಿದ್ದರೂ ಅವಕೃಪೆಗೆ ಒಳಗಾಗಿದೆ. 600 ಎಕರೆ ವಿಸ್ತೀರ್ಣವಿರುವ ಕೆರೆಗೆ ದಕ್ಷಿಣ ಪಿನಾಕಿನಿ ನದಿ ನೀರು ಹರಿಯುತ್ತಿದ್ದು, ಇಲ್ಲಿನ ಪರಿಸರ ವಿದೇಶಿ ವಲಸೆ ಪಕ್ಷಿಗಳ ವಿಹಾರ ತಾಣವಾಗಿದೆ. ವಿದೇಶಿ ಪಕ್ಷಿಗಳ ಕಲವರ ಸೆರೆಹಿಡಿಯಲು ವಾರಾಂತ್ಯದಲ್ಲಿ ಪಕ್ಷಿಪ್ರಿಯರೆ ದಂಡೇ ನೆರೆದಿರುತ್ತದೆ. ಆದರೆ ಸೂಕ್ತ ಮನ್ನಣೆ ಸಿಗದೆ ಅಮಾನಿಕೆರೆ ತೆರೆಮರೆಗೆ ಸರಿಯುವಂತಾಗಿದೆ.


ಎಲೆಮರೆಕಾಯಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ದೇವನಹಳ್ಳಿಯಲ್ಲಿ ಅನೇಕ ಇತಿಹಾಸ ಪ್ರಸಿದ್ಧ ತಾಣಗಳಿವೆ. ಜಿಲ್ಲೆಯ ಮುಕುಟ ಮಣಿಯಾಗಿರುವ ಜಿಲ್ಲಾಡಳಿತಭವನ ಸೇರಿ ಕುಂದಾಣಬೆಟ್ಟ, ಕೊಯಿರಾ, ಚಪ್ಪರದಕಲ್ಲು, ದೇವನಹಳ್ಳಿ ಕೋಟೆ, ಆವತಿ ಬೆಟ್ಟ, ಮಾಕಳಿ ದುರ್ಗ, ಚನ್ನಗಿರಿ ಾಲ್ಸ್, ಹುಲುಕುಡಿ ಬೆಟ್ಟ, ವೇಣುಗೋಪಾಲಸ್ವಾಮಿ ದೇಗುಲ, ಘಾಟಿ ಸುಬ್ರಹ್ಮಣ್ಯ, ಚಿಕ್ಕಮಧುರೆ ಸೇರಿ ಅನೇಕ ಪ್ರವಾಸಿ ತಾಣಗಳು ಅಭಿವೃದ್ಧಿ ವಂಚಿತವಾಗಿವೆ. ಬಹುತೇಕ ಐತಿಹಾಸಿಕ ಸ್ಥಳಗಳೂ ನಿಗೂಢವಾಗಿಯೇ ಉಳಿದುಹೋಗಿವೆ.