ಜಿಲ್ಲೆ

ರೈತರ ಮೇಲಿನ ಪ್ರಕರಣ ವಾಪಸಿಗೆ ಕಾರಂತ ಲೇಔಟ್ ಸಂತ್ರಸ್ತರ ಆಗ್ರಹ

ಬೆಂಗಳೂರು: ಉದ್ದೇಶಿತ ಡಾ. ಕೆ.ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ರೈತರ ಮೇಲೆ ಹೂಡಿರುವ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯವಂತೆ ಲೇಔಟ್‌ಗಾಗಿ ಜಮೀನು ಬಿಟ್ಟುಕೊಟ್ಟಿರುವ ಸಂತ್ರಸ್ತರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ಕಾರಂತ ಬಡಾವಣೆ ಜಮೀನು ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ರಮೇಶ್ ರಾಮಗೊಂಡನಹಳ್ಳಿ ನೇತೃತ್ವದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರನ್ನು ಭೇಟಿಯಾಗಿ ರೈತರ ವಿರುದ್ಧ ದಾಖಲಿಸಿರುವ ಕೇಸ್‌ಗಳನ್ನು ಹಿಂಪಡೆಯುವಂತೆ ಮನವಿಪತ್ರ ಅರ್ಪಿಸಲಾಯಿತು.

ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರು 2013ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಪರಿಹಾರ ವಿತರಿಸುವಂತೆ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ರೀತಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರೂ, ಪೊಲೀಸರು ಹೋರಾಟಗಾರರು ಸೇರಿದಂತೆ ರೈತರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆ ಹತ್ತಿಕ್ಕಲೆಂದೇ ಈ ಕೇಸ್‌ಗಳನ್ನು ಹಾಕಿದ್ದಲ್ಲದೆ, ಒಂದು ವರ್ಷ ಯಾವುದೇ ಧರಣಿ, ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂಬುದಾಗಿ 5 ಲಕ್ಷ ರೂ. ಬಾಂಡ್‌ಅನ್ನು ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಲ್ಲಿ ಬೆರೆಯಿಸಿಕೊಳ್ಳಲಾಗಿದೆ ಎಂದು ರಮೇಶ್ ಅವರು ಗೃಹ ಸಚಿವರ ಗಮನಕ್ಕೆ ತಂದರು.

ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.