ರಾಯಚೂರು: ದೇವದುರ್ಗ ತಾಲೂಕಿನ 33 ಗ್ರಾ.ಪಂ.ಗಳ ಅವೈಜ್ಞಾನಿಕ ವಿಶೇಷ ಸಾಮಾಜಿಕ ಲೆಕ್ಕ ಪರಿಶೋಧನಾ ಮಧ್ಯಂತರ ವರದಿ ಆಧಾರದ ಮೇಲೆ ಅಮಾನತ್ತುಗೊಂಡ ಪಿಡಿಒಗಳ ಅಮಾನತ್ತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸಾಮಾಜಿಕ ಲೆಕ್ಕ ಪರಿಶೋಧನೆ ಅವೈಜ್ಞಾನಿಕವಾಗಿದ್ದು, ಸಾಮಾಜಿಕ ಪರಿಶೋಧನೆ ಇರುವುದು ತಪ್ಪುಗಳು ಮರುಕಳಿಸದಂತೆ ಮಾಡುವ ಪ್ರಯತ್ನವಾಗಿದೆ. ಆದರೆ ಮಧ್ಯಂತರ ವರದಿಯಲ್ಲಿ ಅವ್ಯವಹಾರ ಪದ ಬಳಕೆ ಮಾಡಲಾಗಿದೆ ಎಂದು ದೂರಿದರು.
ರಾಜಧನ ಪಾವತಿಗೆ ನರೇಗಾ ತಂತ್ರಾಂಶದಲ್ಲಿ ಅವಕಾಶ ಇಲ್ಲದಿರುವುದು ರಾಜ್ಯದಲ್ಲಿನ ಸಮಸ್ಯೆಯಾಗಿದೆ. ಇದಕ್ಕೆ ಸೂಕ್ತ ಸುತ್ತೋಲೆಯಿಲ್ಲ. ಬಹುತೇಕ ಕಾಮಗಾರಿಗಲು ಮಣ್ಣಿನ ಕಾಮಗಾರಿಗಳಾಗಿದ್ದು, ಇವೆಲ್ಲವುಗಳನ್ನು ಮೂರು ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ಸಾಧ್ಯವಿಲ್ಲ.
ಪ್ರತಿ ಬಾರಿ ಸಾಮಗ್ರಿ ವೆಚ್ಚ ಭರಿಸುವಾಗ ಜಿಲ್ಲಾ ಮಟ್ಟದ ಅಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಂತರ ಪಾವತಿ ಮಾಡಲಾಗಿದೆ. ಆದರೂ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂಬ ವರದಿಯನ್ನು ಯಾವುದೇ ತಾಂತ್ರಿಕ ಪರಿಣಿತಿ ಇಲ್ಲದ ತಂಡ ವರದಿ ನೀಡಿದೆ.
ಕಾರಣ ಅವೈಜ್ಞಾನಿಕವಾಗಿ ತಯಾರಿಸಿರುವ ವಿಶೇಷ ಸಾಮಾಜಿಕ ಪರಿಶೋಧನೆ ವರದಿಯ ಮೇಲೆ ಕೈಗೊಂಡಿರುವ ಎಲ್ಲ ಕ್ರಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಬೇಕು. ಅಲ್ಲಿಯವರೆಗೆ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ತಿಮ್ಮಪ್ಪ ನಾಯಕ, ಪದಾಕಾರಿಗಳಾದ ಕಿರಣಬಾಬು, ಶರಣಬಸವ, ಶಂಕರ, ಚನ್ನಬಸವ, ಮಹ್ಮದ್ ಇಸಾಖ್, ದೀಪಕ್, ಅನ್ನಪೂರ್ಣ, ಸರಸ್ವತಿ, ಮಹೇಶ್ವರಿ, ನರಸಪ್ಪ, ಕರಿಯಪ್ಪ, ರೇಣುಕಮ್ಮ, ತಾರಕೇಶ್ವರಿ, ಭೀಮರೆಡ್ಡಿ ಪಾಲ್ಗೊಂಡಿದ್ದರು.