ಹುಣಸೂರು ನಗರದಲ್ಲಿ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಆಶಾ, ಮಂಜುಳಾ, ವಸಂತಾ, ರೋಜನಿ ಇತರರಿದ್ದರು.  
ಜಿಲ್ಲೆ

ಬಿಪಿಎಲ್ ಕಾರ್ಡ್ ಸ್ಥಗಿತ ಆದೇಶ ಹಿಂಪಡೆಯಿರಿ

ಶಿವಶಂಕರ್ ಎಂ. ಹೆಬ್ಬಳ್ಳ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹ

ಹುಣಸೂರು : ದುಡಿದು ತಿನ್ನುವ ಜನರ ಸಾವಿರಾರು ಪಡಿತರ ಕಾರ್ಡ್‌ಗಳನ್ನು ಬಿ.ಪಿ.ಎಲ್. ಪರಿಧಿಯಿಂದ ತೆಗೆದು ಹಾಕಿರುವ ಆದೇಶವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬುಧವಾರ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು.

ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಸಂಘಟನೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಕೆ.ಸಿ.ಆಶಾ, ರಾಜ್ಯದಲ್ಲಿ 1,06,152 ರೇಷನ್ ಕಾರ್ಡ್‌ಗಳು ರದ್ದಾಗಿವೆ. ಇದುವರೆಗೆ ಸಿಗುತ್ತಿದ್ದ ರೇಷನ್ ಸಿಗದೆ ಜನ ಪರದಾಡುವಂತಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಆಹಾರ ಇಲಾಖೆಯು ಏಕಾಏಕಿ ದೀಪಾವಳಿ ಹಬ್ಬದ ಸಂದರ್ಭವನ್ನೂ ಪರಿಗಣಿಸದೇ 1 ಲಕ್ಷಕ್ಕೂ ಹೆಚ್ಚು ಜನರ ಕಾರ್ಡ್‌ಗಳನ್ನು ರದ್ದು ಮಾಡಿದೆ. ಇದರಲ್ಲಿ ಬಹುಪಾಲು ಕುಟುಂಬಗಳು ಕಡುಬಡತನದಲ್ಲಿ ಇರುವ ಕುಟುಂಬಗಳೇ ಆಗಿವೆ. ಇದು ಬಡವರ ಹೊಟ್ಟೆ ಮೇಲೆ ಒಡೆಯುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿ.ಪಿ.ಎಲ್. ಕಾರ್ಡ್‌ಗಳು ಕೇವಲ ರೇಷನ್ ಪಡೆಯಲು ಮಾತ್ರವಲ್ಲದೆ ಆರೋಗ್ಯ ಸೌಲಭ್ಯ ಮತ್ತು ಇತರ ಸಾಮಾಜಿಕ ಸುರಕ್ಷೆಗಳಿಗೂ ಅಗತ್ಯವಾದ ದಾಖಲೆಯ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಸರ್ಕಾರ ಕೂಡಲೇ ಬಿಪಿಎಲ್ ರದ್ದತಿಯನ್ನು ಹಿಂಪಡೆದು ಬಡವರಿಗೆ ಪಡಿತರ ಸಿಗುವಂತೆ ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜನವಾದಿ ಸಂಘಟನೆಯ ರೋಜಿನಿ, ಮಂಜುಳಾ, ವಸಂತ, ಸಿರೇನಹಳ್ಳಿ ಜಾನಕಮ್ಮ. ರಾಜಮ್ಮ, ರೇಣುಲಾ ಇತರರು ಇದ್ದರು.