ಜಿಲ್ಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಪತ್ನಿ, ಪತಿ ಕೊಲೆ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ವಯಸ್ಕಳಾದ ಮೇಲೆ ಬೇರ್ಪಟ್ಟು ಮತ್ತೋರ್ವನನ್ನು ವರಿಸಿದ್ದ ಯುವತಿ ಹಾಗೂ ಆಕೆಯ ಪತಿಯನ್ನು ಮಾಜಿ ಪತಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ಹೊರವಲಯದ ಬಾಗೋಡಿ ತೋಟದ ವಸತಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ತೌಪಿಕ್ ಉರ್ಫ್ ಬಾಲೆಸಾಬ ಶೌಕತ್ ಖ್ಯಾಡಿ (23) ಕೊಲೆ ಆರೋಪಿ. ಕೊಕಟನೂರ ಗ್ರಾಮದ ಯಾಸಿನ್ ಆದಮಸಾಬ್ ಬೋಗೋಡಿ (21), ಹಿನಾಕೌಸರ್ ಮೈಬೂಬ್ ಸುಧಾರಾಣಿ (19) ಕೊಲೆಗೀಡಾದವರು. ಯುವಕನ ತಾಯಿ ಅಮೀನಾ ಆದಮಸಾಬ್ ಬಾಗೋಡಿ (42), ಯಾಸೀನ್‌ನ ಸಹೋದರಿಯ ಪತಿ ಮುಸ್ತಫಾ ಬುಡ್ಡು ಮುಲ್ಲಾ (22) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಮೂರ‌್ನಾಲ್ಕು ವರ್ಷಗಳ ಹಿಂದೆ ಕೊಕಟನೂರ ಗ್ರಾಮದ ತೌಪಿಕ್ ಉರ್ಫ್ ಬಾಲೆಸಾಬ ಶೌಕತ್ ಖ್ಯಾಡಿ (23) ಎಂಬುವನ ಜತೆ ಹಿನಾಕಾಸರ ಮೈಬೂಬ ಸುಧಾರಾಣಿ ಬಾಲ್ಯ ವಿವಾಹವಾಗಿದ್ದಳು.

ವಯಸ್ಕಳಾದ ನಂತರ ವಿಚ್ಛೇದನ ಪಡೆದು ಯಾಸಿನ್ ಜತೆ ವಿವಾಹವಾಗಿದ್ದಳು. ಮಂಗಳವಾರ ಯಾಸಿನ್ ತೋಟದ ಮನೆಗೆ ಏಕಾಏಕಿ ಆಗಮಿಸಿದ ಮಾಜಿ ಪತಿ ತೌಫಿಕ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಅಥಣಿ ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಸುಮಲತಾ ಆಸಂಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.