ಲಿಂಗರಾಜ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಂಡಳಿ ಮುಖ್ಯಸ್ಥ ಸುಭಾಷ ಆಡಿ ಉದ್ಘಾಟಿಸಿದರು. ಡಾ. ಆರ್.ಎಂ. ಪಾಟೀಲ, ಡಾ. ಜಿ.ಎನ್. ಶೀಲಿ ಇತರರಿದ್ದರು. 
ಜಿಲ್ಲೆ

ಪ್ರಕೃತಿಯೊಂದಿಗೆ ಜೀವನ ನಡೆಸಿ

ಬೆಳಗಾವಿ: ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಪರಿಸರ ಮಾಲಿನ್ಯ ತಡೆಗಟ್ಟಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಂಡಳಿ ಮುಖ್ಯಸ್ಥ ಸುಭಾಷ ಆಡಿ ಹೇಳಿದ್ದಾರೆ.

ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು ಸಭಾಂಗಣದಲ್ಲಿ ಭೂಗೋಳ ಶಾಸ್ತ್ರ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ‘ಪರಿಸರ ಮಾಲಿನ್ಯದಿಂದ ಪರಿಸರದಲ್ಲಾಗುತ್ತಿರುವ ಬದಲಾವಣೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮರಗಳನ್ನು ಕಡಿದರೆ ನಮ್ಮ ಮಕ್ಕಳ ಕಾಲನ್ನು ನಾವೇ ಕಡಿದ ಹಾಗೆ. ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.

ಮಾಲಿನ್ಯದಿಂದ ಆಪತ್ತು: ಜಾಗತಿಕ ತಾಪಮಾನದಿಂದ ಪ್ರಪಂಚ ಹಲವು ಸಮಸ್ಯೆ ಎದುರಿಸುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಾಲಿನ್ಯ ಮುಂದುವರಿದರೆ ಜಗತ್ತು ಭಾರಿ ಬೆಲೆ ತೆರಬೇಕಾಗುತ್ತದೆ. ವಿಶ್ವಸಂಸ್ಥೆ ಹಾಗೂ ಪ್ರಪಂಚದ ಹಲವು ಮುಂದುವರಿದ ರಾಷ್ಟ್ರಗಳು ಈ ಕುರಿತು ಗಂಭೀರ ಚಿಂತನೆ ನಡೆಸಿವೆ. ಘನತ್ಯಾಜ್ಯ ವಿಲೇವಾರಿ ಸರಿಯಾಗಿ ನಿರ್ವಹಿಸಬೇಕು. ಪರಿಸರ ಮಲಿನಗೊಳಿಸಿದರೆ ನೀಡುವ ಶಿಕ್ಷೆ ಮತ್ತು ದಂಡಗಳು ಇನ್ನಷ್ಟು ಕಠಿಣವಾಗಬೇಕು. ಪ್ರತಿಯೊಬ್ಬರೂ ಪ್ರಕೃತಿಯೊಂದಿಗೆ ಒಂದಾಗಿ ಜೀವನ ನಡೆಸಬೇಕು. ಭಾರತದಲ್ಲಿ ಪರಿಸರ ಸಂರಕ್ಷಣೆಗಾಗಿ ಕಾನೂನು ರೂಪಿಸಿದರೆ ಅದನ್ನು ವಿರೋಧಿಸುವುದು ಸರಿಯಲ್ಲ ಎಂದರು.

ಪರಿಸರ ನಾಶದಿಂದ ಇಂದು ಶುದ್ಧ ನೀರು ಸಿಗದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗುತ್ತಿದೆ. ಆದರೆ, ನಮ್ಮ ಪೂರ್ವಜರ ಕಾಲದಲ್ಲಿ ಶುದ್ಧ ನೀರು ಲಭ್ಯವಿತ್ತು. ಅಂದು ನೀರಿನ ಘಟಕಗಳಿರಲಿಲ್ಲ. ಆ ಕಾಲದಲ್ಲಿ ಪರಿಸರಕ್ಕೆ ಹಾನಿ ಆಗಿರಲಿಲ್ಲ ಎಂದು ಸುಭಾಷ ಆಡಿ ತಿಳಿಸಿದರು.

ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ ಸಂಗಡಿಗರು ಪ್ರಾರ್ಥಿಸಿದರು. ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಶೀಲಿ ಸ್ವಾಗತಿಸಿದರು. ದೀಪಾಲಿ ಗೋಡಗೇರಿ ಅತಿಥಿಗಳನ್ನು ಪರಿಚಯಿಸಿದರು. ಸುಪ್ರಿಯಾ ಮತ್ತು ಗೌರಿ ನಿರೂಪಿಸಿದರು. ಎಂ.ಆರ್. ಬನಹಟ್ಟಿ ವಂದಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪರಿಸರವಾದಿ ಶಿವಾಜಿ ಕಾಂಗಣೀಕರ್, ಪರಿಸರ ಪ್ರೇಮಿ ಮಲ್ಲಿಕಾರ್ಜುನ ಶೆಟ್ಟಿ, ಡಾ. ರಾಜಶೇಖರ ದಂಪತಿ ಇತರರು ಉಪಸ್ಥಿತರಿದ್ದರು.

ದೇಶದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧವಾಗಲಿ

ಹೊರ ದೇಶಗಳಲ್ಲಿ ನೆಲದ ಮೇಲೆ ಕಸ ಚೆಲ್ಲುವುದಿಲ್ಲ. ಯಾರೂ ಸಿಕ್ಕಸಿಕ್ಕಲ್ಲಿ ಉಗುಳುವುದಿಲ್ಲ. ಭಾರತದಲ್ಲಿ ಈ ಸ್ಥಿತಿ ತದ್ವಿರುದ್ಧವಾಗಿದೆ. ಮಲೇಷ್ಯಾದಲ್ಲಿ ಪ್ಲಾಸ್ಟಿಕ್‌ಅನ್ನು ಆಮದು ಮಾಡಿಕೊಳ್ಳುವುದನ್ನೇ ಕೈಬಿಡಲಾಗಿದೆ. ಆ ದೇಶದಲ್ಲಿ ಪ್ಲಾಸ್ಟಿಕ್ ಈಗ ಸಂಪೂರ್ಣ ನಿಷೇಧವಾಗಿದೆ. ಭಾರತದಲ್ಲೂ ಪ್ಲಾಸ್ಟಿಕ್ ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗಬೇಕಿದೆ. ಗ್ರಾಹಕರೇ ಪ್ಲಾಸ್ಟಿಕ್ ಬಳಸಿ ಉತ್ತೇಜನ ನೀಡುತ್ತಿದ್ದಾರೆ. ಈ ಪ್ರವೃತ್ತಿ ನಿಲ್ಲಬೇಕು ಎಂದು ಸುಭಾಷ ಆಡಿ ಕಿವಿಮಾತು ಹೇಳಿದರು.

ನಗರ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ತರಕಾರಿ ತ್ಯಾಜ್ಯದಿಂದಲೂ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಳಗಾವಿ ನಗರವೊಂದರಲ್ಲಷ್ಟೇ ಪ್ರತಿದಿನ ಸುಮಾರು 400 ಟನ್‌ನಷ್ಟು ತರಕಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆ ತ್ಯಾಜ್ಯ ಮರುಬಳಕೆ ಮಾಡಿ ಗೊಬ್ಬರ, ಗೊಬ್ಬರ ಗ್ಯಾಸ್ ತಯಾರಿಕೆಗೆ ಉಪಯೋಗಿಸಿದರೆ ಪರಿಸರ ಮಾಲಿನ್ಯ ಆಗುವುದಿಲ್ಲ. ಪರ್ಯಾಯ ಇಂಧನವೂ ಲಭ್ಯವಾದಂತಾಗುತ್ತದೆ.| ಸುಭಾಷ ಆಡಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಂಡಳಿ ಮುಖ್ಯಸ್ಥ