ಜಿಲ್ಲೆ

ಮೋದಿ ವಿಶ್ವ ನಾಯಕರಾದ ಹಿನ್ನೆಲೆಯಲ್ಲಿ ಪೆಹಲ್ಗಾಮ್ ಘಟನೆಗೆ ವಿಶ್ವದೆಲ್ಲೆಡೆ ನಮಗೆ ಬೆಂಬಲ ದೊರೆತ್ತಿದೆ : ಎಚ್.ಡಿ. ದೇವೇಗೌಡ

ಮೈಸೂರು: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿರುವುದು ಅತ್ಯಂತ ಹೇಯ ಕೃತ್ಯ. ಉಗ್ರರ ಶೋಧ ಕಾರ್ಯವನ್ನು ಸೇನೆ ಕೈಗೊಂಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕೋ ಸಮಯ ಬಂದಾಗ ಅಂತಹ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘಟನೆ ಬಳಿಕ ಕಾಂಗ್ರೆಸ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಬುದ್ಧವಾದ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ನಮ್ಮ ಐಕ್ಯತೆ ತೋರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಲ್ಲದೆ ಉಗ್ರರನ್ನು ಮಟ್ಟ ಹಾಕಬೇಕು ಎಂದು ಐಎನ್‌ಡಿಐಎ ಮಿತ್ರ ಪಕ್ಷಗಳು ಕರೆ ನೀಡಿವೆ. ದೇಶದ ಜನತೆ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ ಎಂದರು.

ನರೇಂದ್ರ ಮೋದಿ ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಹೀಗಾಗಿ ಪೆಹಲ್ಗಾಮ್ ಘಟನೆ ವಿಚಾರವಾಗಿ ವಿಶ್ವದ ಹಲವು ರಾಷ್ಟ್ರಗಳಿಂದ ನಮಗೆ ಬೆಂಬಲ ದೊರೆಯುತ್ತಿದೆ. ಹಲವಾರು ರಾಷ್ಟ್ರಗಳ ನಾಯಕರು ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಜತೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಾನು ಘಟನೆಯಾದ ತಕ್ಷಣ ನನ್ನ ಅಭಿಪ್ರಾಯ ಹೇಳಿದ್ದೇನೆ. ನನಗೆ ಬುದ್ಧಿಯ ಕೊರತೆ ಇಲ್ಲ, ಆದರೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಿದರು.