ಬೆಳಗಾವಿ: ಪತ್ರಕರ್ತರು ದೇವರು ಮತ್ತು ಕೆಲಸ ಕೊಟ್ಟ ಮಾಲೀಕರಿಗೆ ಹೆದರದಿದ್ದರೂ ಸತ್ಯಕ್ಕೆ ಹೆದರಬೇಕು. ಸತ್ಯವಾದದ್ದನ್ನೇ ಬರೆಯಬೇಕು. ಸವಾಲುಗಳನ್ನು ಎದುರಿಸುವ ಧೈರ್ಯ ಹೊಂದಿರಬೇಕು ಎಂದು ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನೆಹರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. 1842ರ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಜರ್ಮನ್ ದೇಶದ ಫಾದರ್ ಹರ್ಮನ್ ಮೊಗ್ಲಿನ್ ಅವರು ಕನ್ನಡ ಕಲಿತು ಜನರಿಗೆ ಸಂದೇಶ, ಮಾಹಿತಿ ತಿಳಿಸಲು ಬಳ್ಳಾರಿಯಲ್ಲಿ ‘ಕನ್ನಡ ಸಮಾಚಾರ’ ಎಂಬ ಪತ್ರಿಕೆ ಪ್ರಾರಂಭಿಸಿದರು. ಬಳಿಕ ಮಂಗಳೂರಿನಲ್ಲಿ ಅವರು ಜುಲೈ 1ರಂದು ‘ಮಂಗಳೂರು ಸಮಾಚಾರ’ ಎಂಬ ಪತ್ರಿಕೆ ಪ್ರಾರಂಭಿಸಿದರು. ಹಾಗಾಗಿ ದಾಖಲೆಗಳ ಪ್ರಕಾರ ಮಂಗಳೂರು ಸಮಾಚಾರ ಪತ್ರಿಕೆಯನ್ನು ಕನ್ನಡದ ಮೊಟ್ಟ ಮೊದಲು ಪತ್ರಿಕೆ ಎಂದು ಕರೆಯಲಾಗುತ್ತದೆ. ಈ ದಿನವನ್ನು ಪತ್ರಿಕಾ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದರು.
ಬಹಳಷ್ಟು ಜನ ಪತ್ರಕರ್ತರು ಸ್ವಂತ ಮನೆಯಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈಗಿರುವ ಕುವೆಂಪು ನಗರದಲ್ಲಿ ಸುಮಾರು 20 ವರ್ಷಗಳ ಹಿಂದೆ ಪತ್ರಕರ್ತರಿಗೆ ನಿವೇಶನ ನೀಡಲಾಗಿತ್ತು. ಅದರಂತೆ ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡುವ ನಿಟ್ಟಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಶಾಸಕ ಆಸೀಫ್ ಸೇಠ್ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಯಿಂದ ಸುದ್ದಿಗಳ ಹರಿವು ಹೆಚ್ಚಾಗಿವೆ. ಪತ್ರಕರ್ತರು ಸುದ್ದಿಯ ವಾಸ್ತವ ಅಂಶ ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಬೇಕು. ಪಾರದರ್ಶಕ ವರದಿ ಮೂಲಕ ಜನತೆಗೆ ಸತ್ಯಾಂಶ ತಿಳಿಸಿ ಕೊಡಬೇಕು. ಸತ್ಯ, ಸುಳ್ಳುಗಳನ್ನು ಪರಿಶೀಲಿಸಿ ವರದಿ ಮಾಡಲು ಮುಂದಾಗಬೇಕು ಎಂದರು.
ಗೋಕಾಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಯಾರಿಗೂ ಹಿಂಜರಿಯದೆ ನೇರವಾಗಿ ವರದಿ ಮಾಡಬೇಕು. ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕಾರ್ಯನಿರತ ಪತ್ರಕರ್ತ ಸಂಘಟನೆ ಸದಾ ಬೆಂಬಲವಾಗಿ ನಿಂತಿದೆ ಎಂದರು. ಡಿಸಿಪಿ ರೋಹನ್ ಜಗದೀಶ ಮಾತನಾಡಿ, ಸಮಾಜದ ಬೆಳವಣಿಗೆಗೆ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರ ಸಹಭಾಗಿತ್ವ ತುಂಬ ಮುಖ್ಯ. ಪತ್ರಿಕೋದ್ಯಮ
ದೇಶದ ನಾಲ್ಕನೇ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ನಿಮ್ಮೆಲ್ಲರ ಸಹಕಾರ ತುಂಬ ಅಗತ್ಯ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರು ಮಾತನಾಡಿ, ಪತ್ರಿಕೋದ್ಯಮದಲ್ಲಿ ಈಗ ಚರ್ಚೆ ಆಗುತ್ತಿರುವುದು ವೃತ್ತಿ ಧರ್ಮ ಪಾಲನೆ, ನೈತಿಕತೆ ಬಗ್ಗೆ. ಈಗಾಗಲೇ ಬಹಳಷ್ಟು ಸವಾಲುಗಳು ಎದುರಾಗುತ್ತಿವೆ. ಈಗೀಗ ಸಾಮಾಜಿಕ ಜಾಲತಾಣಗಳು ಪತ್ರಿಕೋದ್ಯಮ ಸ್ವರೂಪ ಪಡೆದುಕೊಳ್ಳುತ್ತಿವೆ. ಪತ್ರಿಕೋದ್ಯಮ ಸ್ವರೂಪ ಬದಲಾಗುತ್ತಿರುವುದನ್ನು ಗಮನಿಸಿ ನಮ್ಮ ವಿಚಾರಗಳನ್ನು ನಮ್ಮ ಕಾರ್ಯಕ್ಷಮತೆ ಬದಲಾಯಿಸಿಕೊಂಡು ಎಲ್ಲರೂ ಯಶಸ್ವಿ ಪತ್ರಕರ್ತರಾಗಿ ಮುನ್ನಡೆಯೋಣ ಎಂದರು. ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕುರಂದವಾಡಿ ಮಾತನಾಡಿ, ಕಾಲಕ್ಕೆ ತಕ್ಕಂತೆ ಪತ್ರಕರ್ತರು ಇಂದಿನ ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಂದಿಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತೆ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಜತೆಗೆ ಹಿರಿಯ ಪತ್ರಿಕಾ ವಿತರಕರು, ಹಿರಿಯ ಪತ್ರಕರ್ತರನ್ನು ಸತ್ಕರಿಸಲಾಯಿತು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಹಿರಿಯ ಪತ್ರಕರ್ತರಾದ ಕೆ.ಸುರೇಶ, ಬ್ರಹ್ಮಾನಂದ ಹಡಗಲಿ, ಎಂ.ಕೆ.ಹೆಗಡೆ, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರ ಕುಟುಂಬಸ್ಥರು ಇದ್ದರು.