ಜಿಲ್ಲೆ

ಕುಡುಗೋಲಿನಿಂದ ಕೊಚ್ಚಿ ಕೊಲೆ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ಗದ್ದೆಯಲ್ಲಿ ನೀರು ಹಾಯಿಸುವ ವಿಚಾರಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ರಾಮಪ್ಪ ಬಸವಂತಪ್ಪ ಕೌಜಲಗಿ(25) ಮತ ವ್ಯಕ್ತಿ, ಸಿದ್ದಪ್ಪ ಮಲ್ಲಪ್ಪ ಕೌಜಲಗಿ(24) ಕೊಲೆ ಮಾಡಿದ ಆರೋಪಿ.

ಇವರಿಬ್ಬರು ಸಂಬಂಧಿಕರಾಗಿದ್ದು, ಗದ್ದೆಯಲ್ಲಿ ನೀರು ಹಾಯಿಸುವ ವಿಚಾರಕ್ಕೆ ರಾಮಪ್ಪ ಹಾಗೂ ಅವನ ತಂದೆ ಬಸವಂತಪ್ಪ ಮತ್ತು ಸಿದ್ದಪ್ಪನ ನಡುವೆ ಗಲಾಟೆ ನಡೆದಿದೆ. ಅದು ವಿಕೋಪಕ್ಕೆ ತಿರುಗಿ ಸಿದ್ದಪ್ಪ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ರಾಮಪ್ಪನನ್ನು ಕೊಲೆ ಮಾಡಿದ್ದು, ತಡೆಯಲು ಹೋದ ರಾಮಪ್ಪನ ತಂದೆ ಬಸವಂತಪ್ಪನ ಮೇಲೂ ಹಲ್ಲೆ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಬಸವಂತಪ್ಪನನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಎಡಿಷನಲ್ ಎಸ್ಪಿ ಶ್ರುತಿ ಎನ್.ಎಸ್., ಡಿವೈಎಸ್ಪಿ ದೂದಪೀರ್ ಮುಲ್ಲಾ, ಸಿಪಿಐ ಶ್ರೀಶೈಲ ಬ್ಯಾಕೋಡ ಹಾಗೂ ಪಿಎಸ್‌ಐ ರಾಜು ಪೂಜೇರಿ ಭೇಟಿ ನೀಡಿ ಪರಿಶೀಲಿಸಿದ್ದು, ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.