ಜಿಲ್ಲೆ

ರಾಬಕೊವಿ ಆವರಣದಲ್ಲಿ ವಾಮಾಚಾರ

ಬಳ್ಳಾರಿ, ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಕಚೇರಿಯ ಬಳಿ ಸೋಮವಾರ ವಾಮಾಚಾರದ ರೀತಿಯ ಕೃತ್ಯ ಕಂಡು ಬಂದಿದೆ.

ಭಾನುವಾರ ರಾತ್ರಿಯೇ ದುಷ್ಕರ್ಮಿಗಳು ನಿಂಬೆಹಣ್ಣು, ಕುಂಬಳಕಾಯಿ ತಂದಿಟ್ಟು, ಕುಂಕುಂಮ ಹರಡಿ, ಮೊಳೆ ಹೊಡೆದು, ಸಣ್ಣ ಗಡಿಗೆಗೆ ದಾರ ಸುತ್ತಿ, ತೆಂಗಿನಕಾಯಿಗೆ ತಾಯತ ಕಟ್ಟಿ ವಾಮಾಚಾರ ಮಾಡಿರುವಂತೆ ಬಿಂಬಿಸುವ ಪ್ರಯತ್ನ ಮಾಡಿ ಹೋಗಿದ್ದಾರೆ.

ಸೋಮವಾರ ಬೆಳಗ್ಗೆ ಕಚೇರಿ ಸಿಬ್ಬಂದಿ ಇದನ್ನು ಗುರುತಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕಚೇರಿಗೆ ಬಂದ ಬಳಿಕ ಅವರ ಸೂಚನೆಯಂತೆ ಎಲ್ಲವನ್ನೂ ಸುಟ್ಟು, ಸ್ಥಳವನ್ನು ತೊಳೆಯಲಾಗಿದೆ. ಸಂಸ್ಥೆಗೆ ಬಿಗಿ ಭದ್ರತೆ ಇದ್ದಾಗ್ಯೂ, ಆವರಣದಲ್ಲೇ ಇಂಥ ಕೃತ್ಯ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಸದ್ಯ ಉದ್ಭವಿಸಿವೆ. ಈ ಹಿಂದೆಯೂ ಹಲವು ಬಾರಿ ರಾಬಕೊವಿ ಕಚೇರಿ ಆವರಣದಲ್ಲಿ ಇಂಥದ್ದೇ ಪ್ರಸಂಗಗಳು ನಡೆದಿದ್ದವು ಎನ್ನಲಾಗಿದೆ.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ ಮಾತನಾಡಿ, ಈ ಕೃತ್ಯದಿಂದ ಸಂಸ್ಥೆಯಲ್ಲಿ ಮೂಡಿರುವ ಭಯದ ವಾತಾವರಣ ನಿವಾರಣೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಕಾನೂನಾತ್ಮಕ ಕ್ರಮಗಳನ್ನೂ ಅನುಸರಿಸಲಾಗುವುದು. ಪೊಲೀಸರಿಗೂ ತಿಳಿಸಲಾಗುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.