ಜಿಲ್ಲೆ

ನಿರುದ್ಯೋಗಿಗಳಿಗೆ ವರದಾನ ; ; ವಿಸ್ಟ್ರನ್ ಕಂಪನಿ ಸ್ಥಾಪನೆಯಿಂದ 10 ಸಾವಿರ ಯುವಕರಿಗೆ ಉದ್ಯೋಗ

Kolar

ಕೋಲಾರ: ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆ ಹೆಚ್ಚಾಗುತ್ತಿದ್ದು ಈಗಾಗಲೇ ತಲೆ ಎತ್ತಿರುವ ಹೋಂಡಾ, ಮಹಿಂದ್ರ ಏರೋಸ್ವೇಸ್, ಸ್ಕ್ಯಾನಿಯಾ ಕಂಪನಿಗಳ ನಡುವೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ ತೈವಾನ್ ಮೂಲದ ವಿಸ್ಟ್ರನ್ ಇನ್ ಫೋ ಕಾಮ್ ಪ್ರೈ.ಲಿ. ಆ್ಯಪಲ್ ಕಂಪನಿಯ ಸಹಯೋಗದಲ್ಲಿ ಐ ಫೋನ್ ಸೇರಿ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಗೆ ಸಜ್ಜಾಗುತ್ತಿದೆ.

ಜಿಲ್ಲೆಯ ನಿರುದ್ಯೋಗ ಸಮಸ್ಯೆಗೆ ಕೈಗಾರಿಕಾ ಕ್ರಾಂತಿಯಿಂದಾಗಿ ಅನೇಕ ಕುಟುಂಬಳಿಗೆ ವರದಾನವಾಗಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿದಲ್ಲಿ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ.

10 ಸಾವಿರ ಉದ್ಯೋಗ ಸೃಷ್ಟಿ: ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಸುಮಾರು 43 ಎಕರೆ ಪ್ರದೇಶದಲ್ಲಿ ವಿಸ್ಟ್ರನ್ ಕಂಪನಿ ನಿರ್ಮಾಣವಾಗಿದೆ. ಇಲ್ಲಿ ಆ್ಯಪಲ್ ಐ ಫೋನ್ ಎಸ್ ಇ 2020 ಉತ್ಪನ್ನವನ್ನು ತಯಾರಿಸಲಾಗುವುದು. ಇದರಿಂದ ಸುಮಾರು 10 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ.

ಪ್ರಧಾನಿ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರೂಪುಗೊಳ್ಳುತ್ತಿರುವ ಮಹತ್ವದ ಯೋಜನೆ ಇದಾಗಿದೆ. ಕಂಪನಿಯು ಸುಮಾರು 2900 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಸ್ಮಾರ್ಟ್ ಪೋನ್, ಅಂತರ್ಜಾಲ, ಜೈವಿಕ ತಂತ್ರಜ್ಞಾನ ಸಂಬಂಧಿ ಉಪಕರಣಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಉದ್ಯೋಗಿಗಳಿಗೆ ತರಬೇತಿ: ಕಂಪನಿಯು ಈಗಾಗಲೇ ಸುಸಜ್ಜಿತ ಘಟಕ ಸ್ಥಾಪಿಸಿ ಆರಂಭಿಕ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದೆ. ಮೊದಲ ಹಂತದಲ್ಲಿ 5000 ನೌಕರರನ್ನು ಕಂಪನಿ ನೇಮಿಸಿಕೊಳ್ಳಲು ಮುಂದಾಗಿದ್ದು, ಈಗಾಗಲೇ ಡಿ ಗ್ರೂಪ್, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಹಂತದಲ್ಲಿ 2700 ಮಂದಿಯನ್ನು ನೇಮಕ ಮಾಡಿಕೊಂಡು ಉದ್ಯೋಗಿಗಳಿಗೆ ಪೂರ್ವ ತರಬೇತಿ ನೀಡುತ್ತಿದೆ. ಕರೊನಾ ಹಿನ್ನೆಲೆಯಲ್ಲಿ 3 ತಿಂಗಳ ಕಾಲ ಕಂಪನಿ ಮುಚ್ಚಲಾಗಿತ್ತು. ಕಳೆದ ಒಂದು ತಿಂಗಳಿಂದ ಮತ್ತೆ ಕೆಲಸ ಆರಂಭಿಸಲಾಗಿದೆ. ಪ್ರಸ್ತುತ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದೆ, ಹೆಣ್ಣು ಮಕ್ಕಳೂ ಸಹ ಅತ್ಯಂತ ಉತ್ಸಾಹದಿಂದ ಕಂಪನಿ ಸೇರಲು ಹೆಜ್ಜೆ ಇಟ್ಟಿದ್ದಾರೆ. ಪ್ರತಿದಿನ ಕನಿಷ್ಠ 50ರಿಂದ 100 ಯುವಕರು ಸಂದರ್ಶನಕ್ಕೆ ಹಾಜರಾಗುತ್ತಿದ್ದಾರೆ. ಬೇಡಿಕೆಗೆ ತಕ್ಕಷ್ಟು ಜನರನ್ನು ತಕ್ಷಣ ನೇಮಿಸಿಕೊಳ್ಳಲಾಗುತ್ತಿದೆ. ಬಿಇ ಪದವೀಧರರಿಂತ ಡಿಪ್ಲೊಮಾ ಹಾಗೂ ಐಟಿಐ ಮುಗಿಸಿರುವ ಅಭ್ಯರ್ಥಿಗಳಿಗೆ ತ್ವರಿತಗತಿಯಲ್ಲಿ ನೇಮಕಾತಿ ಆದೇಶ ನೀಡಲಾಗುತ್ತಿದೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್ ಕಂಪನಿಗೆ 2018ರಲ್ಲಿ 43 ಎಕರೆ ಮಂಜೂರು ಮಾಡಲಾಗಿದ್ದು, 682 ಕೋಟಿ ರೂ.ವೆಚ್ಚದಲ್ಲಿ ಘಟಕ ನಿರ್ಮಾಣಗೊಂಡಿದೆ. ಯಂತ್ರಗಳ ಅಳವಡಿಕೆಗೆ ವಿದೇಶಗಳಿಂದ ತಂಡ ಬರಬೇಕಿದೆ. ಹಿಂದೆ 3000 ರಿಂದ 6000 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಹೇಳಿತ್ತು. ಹೆಚ್ಚುವರಿಯಾಗಿ 5 ಎಕರೆ ಮಂಜೂರು ಮಾಡಿದರೆ 10,000 ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿರುವುದರಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು. ಸಿ.ಸತ್ಯಭಾಮ, ಜಿಲ್ಲಾಧಿಕಾರಿ ಐ ಫೋನ್ ಕಂಪನಿ ಸ್ಥಾಪನೆಯಿಂದ ಜಿಲ್ಲೆಯ ಯುವಕರಿಗೆ ವರದಾನವಾಗಿದೆ. ಯಂತ್ರೋಪಕರಣಗಳ ಅಳವಡಿಕೆ ಹಾಗೂ ನೇಮಕಾತಿಗೊಂಡಿರುವವರಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಸಿಗಬೇಕೆಂಬುದು ನನ್ನ ಆಸೆ. ಈಗಾಗಲೇ ನಾನೇ ಅನೇಕರಿಗೆ ಕೆಲಸ ಕೊಡಿಸಿರುವೆ. ಇದರಿಂದ ಜಿಲ್ಲೆಯ ಬೆಳವಣಿಗೆಗೆ ಅನುಕೂಲವಾಗಲಿದೆ. ಎಸ್.ಮುನಿಸ್ವಾಮಿ, ಸಂಸದರು, ಕೋಲಾರ