ಜಿಲ್ಲೆ

ಸಾಹಿತಿ, ಪ್ರಕಾಶಕ ವಿಷ್ಣು ನಾಯ್ಕ ಇನ್ನಿಲ್ಲ

ಕಾರವಾರ/ಅಂಕೋಲಾ: ಸಾಹಿತಿ, ಪ್ರಕಾಶಕ, ನಾಟಕಕಾರ, ವಿಷ್ಣು ನಾಯ್ಕ(79)ಶನಿವಾರ ನಿಧನ ಹೊಂದಿದರು. ಕೆಲ ದಿನಗಳಿಂದ ಅವರು ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದರು. ಮೃತರಿಗೆ ಭಾರತಿ ಮತ್ತು ಅಮಿತಾ ಎಂಬ ಪುತ್ರಿಯರು ಅಪಾರ ಬಂಧುಗಳಿದ್ದಾರೆ. ಭಾನುವಾರ ಸ್ವಗ್ರಾಮದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು.
ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಗರಡಿಯಲ್ಲಿ ಪಳಗಿದ ವಿಷ್ಣು ನಾಯ್ಕರು, ಕೇವಲ ಸಾಹಿತ್ಯ ಕೃಷಿಗೆ ಸೀಮಿತವಾಗಿರದೇ ಸ್ವತಃ ನಾಟಕಗಳನ್ನು ಬರೆದು ಅಭಿನಯಿಸಿದರು. ತಮ್ಮದೇ ಆದ ರಾಘವೇಂದ್ರ ಪ್ರಕಾಶನ ಪ್ರಾರಂಭಿಸಿ ಕನ್ನಡ ಪುಸ್ತಕಗಳನ್ನು ಮುದ್ರಿಸಿದರು. ಪತ್ರಕರ್ತರಾಗಿ, ಅಂಕಣಕಾರರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿ ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ವಿವಿಧ ಆಯಾಮಗಳಲ್ಲಿ ಕೊಡುಗೆ ನೀಡಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೆ ರಂಗಭೂಮಿಯ ಮೇಲೆ ಒಲವು ಹೊಂದಿದ್ದ ವಿಷ್ಣು ನಾಯ್ಕರು, 1963 ರಿಂದ ವರ್ಷಕ್ಕೊಂದರಂತೆ ಹೊಸ ನಾಟಕ ಬರೆದು, ನಿರ್ದೇಶಿಸಿದರು. ಕನ್ನಡದ ಪ್ರಸಿದ್ಧ ನಾಟಕಕಾರರೆಲ್ಲರ ಜತೆ ಅವರು ಪಾತ್ರಧಾರಿಯಾಗಿ, ನಿರ್ದೇಶಕರಾಗಿ ಪಾಲ್ಗೊಂಡಿದ್ದಾರೆ. ರಾಘವೇಂದ್ರ ರಂಗಸಂಗ ಎನ್ನುವ ಕಲಾತಂಡವನ್ನು ಕಟ್ಟಿ ರಂಗ ಹಾಗೂ ಬೀದಿನಾಟಕಗಳನ್ನು ಆಡುತ್ತಿದ್ದರು.ಸಾಮಾಜಿಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಸರಾಯಿ ಸೂರಪ್ಪ (1986), ಬೋಳುಗುಡ್ಡ (1987), ಬಿನ್ನಹಕೆ ಬಾಯಿಲ್ಲ (1988),ಒಂದು ಹನಿ ರಕ್ತ (1993), ಅಯ್ನೋರ ಪೂಜೆ (1995), ಸಾವಿನ ಹಾದಿ (1999), ಯುದ್ಧ (2001), ಪ್ರೀತಿ ಜಗತ್ತಿನ ದೊರೆ (2002) ಅವರ ಪ್ರಮುಖ ನಾಟಕಗಳು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಕೆಲವು ಯಕ್ಷಗಾನಗಳಲ್ಲೂ ಪಾತ್ರ ವಹಿಸಿದ್ದರು. ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾದ `ಅಮೃತ ಸಿಂಚನ' ಧಾರಾವಾಹಿಯಲ್ಲಿ ನಟಿಸಿದ್ದರು.
ಅಂಕಣ, ಮುದ್ರಣ:
ದಿನಕರ ದೇಸಾಯಿ ಅವರ ಜನಸೇವಕ, ಮುನ್ನಡೆ, ಮುಂಗಾರು ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದರು. ವಿಶಾಲ ಕರ್ನಾಟಕ, ಮುಂಗಾರು, ಕರಾವಳಿ ಸುಪ್ರಭಾತ, ತೇಜಸ್ವಿ ಪ್ರಪಂಚ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದರು. 1973 ರಲ್ಲಿ ರಾಘವೇಂದ್ರ ಪ್ರಕಾಶನ ಪ್ರಾರಂಭಿಸಿದ ಅವರು ಇದುವರೆಗೆ 180 ಕ್ಕೂ ಅಧಿಕ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಇದೇ ಪ್ರಕಾಶನದ ಮೂಲಕ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಕೆಲ ವರ್ಷಗಳ ಹಿಂದಿನವರೆಗೂ ಆಯೋಜಿಸಿದ್ದರು. ಗೌರೀಶ ಕಾಯ್ಕಿಣಿಯವರ ಸಮಗ್ರ ಸಾಹಿತ್ಯ (10 ಸಂಪುಟಗಳು), ಅಕಬರ ಅಲಿ ಜೀವನ-ಸಾಹಿತ್ಯ, ಸಾಹಿತ್ಯದಲ್ಲಿ ನವ್ಯತೆ, ದಿನಕರನ ಆಯ್ದ ಚೌಪದಿ, ವಿ.ಎ.ತೊರ್ಕೆ ಸಮಗ್ರ ಸಾಹಿತ್ಯ, ಜಿನದೇವ ನಾಯಕ ಬದುಕು ಬರಹ, ಗೌರೀಶ ಕಾಯ್ಕಿಣಿ ಆಯ್ದ ಬರಹಗಳು, ನೀವೂ ದಾರ ಕಟ್ಟಿ (ವಿವಿಧ ಲೇಖಕರ ಬಹುಮಾನಿತ ಕತೆಗಳು)ನ್ನು ಅವರು ಸಂಪಾದಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಇತ್ತೀಚಿನ ದಶಕಗಳಲ್ಲಿ ಸಾಹಿತ್ಯದ ಆಳವಾದ ಅಧ್ಯಯನ ಇರುವ ಸಾಹಿತಿಯಾಗಿದ್ದವರು ವಿಷ್ಣು ನಾಯ್ಕರು. ಅವರು ತಮ್ಮ ಮನೆಯಲ್ಲೇ 8 ಸಾವಿರಕ್ಕೂ ಅಽಕ ಪುಸ್ತಕಗಳ ದೊಡ್ಡ ಭಂಡಾರ ಇಟ್ಟುಕೊಂಡಿದ್ದರು. ತಮ್ಮ ಅಮ್ಮನ ಹೆಸರಿನಲ್ಲಿ ಮನೆಯನ್ನೇ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಿದ್ದು, ನೂರಾರು ದೇಸಿ ವಸ್ತುಗಳನ್ನು ಸಂಗ್ರಹಿಸಿದ್ದರು. ಉತ್ತರ ಕನ್ನಡದ ಕನ್ನಡ ಕಾರ್ಯಕ್ರಮಗಳಿಗೆ ಸದಾ ಸಿದ್ಧರಿರುತ್ತಿದ್ದರು.
ಬಾಲ್ಯ, ಜೀವನ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂಬಾರಕೊಡ್ಲದಲ್ಲಿ ಬುದವಂತಿ, ನಾಗಪ್ಪ ಎಂಬ ಕೃಷಿಕರ ಮಗನಾಗಿ 1944 ರ ಜುಲೈ 1 ರಂದು ಜನಿಸಿದ ವಿಷ್ಣು ನಾಯ್ಕ ಅವರು ಅಂಕೋಲಾದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಪಡೆದರು. ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್, ಹಾಗೂ ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರು ವಿಶ್ವ ವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅಂಕೋಲಾ ಕೆನರಾ ವೆಲೇರ್ ಟ್ರಸ್ಟ್ನ ಕಾಲೇಜ್‌ನಲ್ಲಿ ಕನ್ನಡ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ವಿಷ್ಣು ನಾಯ್ಕರು ಪುಸ್ತಕ ಬರೆದು ಬೋಽಸುವವರು ಮಾತ್ರವಾಗಿರಲಿಲ್ಲ. ಸ್ವಂತ ಜೀವನದಲ್ಲೂ ಜಾರಿಗೆ ತರುತ್ತಿದ್ದರು. ಸಾಕಷ್ಟು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡ ಅಭಿವೃದ್ಧಿ ಪ್ರಾಽಕಾರದ ಸದಸ್ಯರಾಗಿದ್ದರು. ಸರ್ಕಾರದ ನಿರಂತರ ಕಲಿಕೆ ಕಾರ್ಯಕ್ರಮದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. 1998 ರಿಂದ2001 ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.2005 ರಲ್ಲಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ, ನಂತರ ಕನ್ನಡ ರಾಜ್ಯೋತ್ಸವ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣಾ ಸಲಹಾ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಗ್ರಂಥಾಲಯ ಪ್ರಾಕಾರದ ಉತ್ತರ ಕನ್ನಡ ಜಿಲ್ಲಾ ಸಮಿತಿ ಸದಸ್ಯಸರಾಗಿದ್ದರು. ಸ್ಥಳೀಯವಾಗಿ ದಿನಕರ ದೇಸಾಯಿ ಅವರ ಜತೆಗೆ 1960 ದಶಕದಲ್ಲಿ ರೈತ ಆಂದೋಲನದಲ್ಲಿ ಪಾಲ್ಗೊಂಡರು. 1962 ರಲ್ಲಿ ಸಮಾಜವಾದಿ ಯುವಕ ಸಂಘವನ್ನು ಸ್ಥಾಪಿಸಿ ವಿವಿಧ ಕಾರ್ಯಗಳನ್ನು ಕೈಗೊಂಡರು. ಅಂಕೋಲಾ ಕರ್ನಾಟಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಕಾರ್ಯದರ್ಶಿಯಾಗಿ ಸಂಘಕ್ಕೆ ವಿಶೇಷ ಗೌರವ ತಂದರು. ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.
ಪ್ರಶಸ್ತಿ, ಗೌರವಗಳು:
2006 ರಲ್ಲಿ ಕರ್ನಾಟಕ ರಾಜೊತ್ಸವ ಪ್ರಶಸ್ತಿ, ದುಡಿಯುವ ಕೈಗಳ ಹೋರಾಟದ ಕತೆಗೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2004 ನೇ ಸಾಲಿನ ಮಾನವಿಕ ವಿಭಾಗದ ಅತ್ಯುತ್ತಮ ಪುಸ್ತಕಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1994 ರಲ್ಲಿ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಕನ್ನಡ ಲೇಖಕ ಮತ್ತು ಪ್ರಕಾಶಕರ ರಾಜ್ಯ ಸಂಘದಿAದ 2003 ನೇ ಸಾಲಿನ ಅತ್ಯುತ್ತಮ ಗ್ರಂಥ ಪ್ರಕಾಶನ ಪ್ರಶಸ್ತಿ, ಒಟ್ಟು ಸಾಹಿತ್ಯ ಸಾಧನೆಗಾಗಿ 2000 ಇಸವಿಯಲ್ಲಿ ಕುಮಟಾದ ಡಾ.ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, 2004 ರಲ್ಲಿ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ, 1998 ರಲ್ಲಿ ಆಲ ಮತ್ತು ಬಾಲ ಕವನ ಸಂಕಲನಕ್ಕೆ ಸಿಂದಗಿಯ ಅಂಬಿಕಾತನಯದತ್ತ ಪ್ರತಿಷ್ಠಾನದಿಂದ ಬೇಂದ್ರೆ ಕಾವ್ಯ ಪುರಸ್ಕಾರ, ಲಿಂಗರಾಜ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿ, 1997 ರಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸ್ವಾತಂತ್ರ‍್ಯ ಸ್ವರ್ಣಜಯಂತಿ ಗೌರವಗಳು ಅವರಿಗೆ ಸಂದಿವೆ.
ಕವನ ಸಂಕಲನ
ಸುಮನ (1973), ಆ ರತಿ ಈ ರೀತಿ (1978), ನನ್ನ ಅಂಬಾರಕೊಡಲು (1983),ವಾಸ್ತವ (1988),ಹೊಸಬತ್ತ (1992),
ಕಳಕೊಂಡ ಕವಿತೆ (1996),ಆಲ ಮತ್ತು ಬಾಲ (1998),ನೋವು ಪ್ರೀತಿಯ ಪ್ರಶ್ನೆ (1998),ಮುಚ್ಚಿದ ಬಾಗಿಲು ಮತ್ತು ಮರಿ ಗುಬ್ಬಿ (2000),ಬೆಳಕಿನ ಕರೆ (2002), ಭಾವ (2003), ನೂರೆಂಟು ಕಿಟಕಿಗಳು (2006) ಕವನ ಸಂಕಲನಗಳನ್ನು ಬರೆದಿದ್ದಾರೆ. ಕಣ್ಣೀರ ಕತೆಗಳು (1974), ಹದ್ದುಪಾರಿನ ಹಿಂದೆ ಮುಂದೆ (1982),ದುಡಿಯುವ ಕೈಗಳ ಹೋರಾಟದ ಕತೆ (2004)ಎಂಬ ಕಥಾ ಸಂಕಲನಗಳನ್ನು ಬರೆದಿದ್ದಾರೆ. ಪರಿಮಳ (1975), ಕವಿ-ಕರ್ಮಯೋಗಿ ದಿನಕರ ದೇಸಾಯಿ (1987), ಸರ್ವಪಲ್ಲಿ ರಾಧಾಕೃಷ್ಣನ್ (2005), ಜನಸೇವಕ ಕವಿ ದಿನಕರ ದೇಸಾಯಿ (2005) ಎಂಬ ವ್ಯಕ್ತಿ ಪರಿಚಯ ಪುಸ್ತಕಗಳು, ಮರ್ಯಾದೆ (1998), ಪ್ರಮಾಣ (1999), ಅರೆಖಾಸಗಿ (2004), ಅರೆಖಾಸಗಿ (2005), ವರ್ತಮಾನದ ಕಣ್ಣು (2006), ಕಾಲೋಚಿತ (2006), ವರ್ತಮಾನದ ಕಣ್ಣು (2007) ಮುಂತಾದ ವಿಮರ್ಷೆ ಹಾಗೂ ಅಂಕಣ ಬರಹ ಪ್ರಕಟಿಸಿದ್ದರು.