ವಿಜಯಪುರ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ವಲಯ ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಾಗಾರವನ್ನು ಕುಲಪತಿ ಡಾ. ಪಿ. ಎಲ್. ಪಾಟೀಲ ಉದ್ಘಾಟಿಸಿದರು. ಡಾ. ಬಿ.ಡಿ. ಬಿರಾದಾರ, ಡಾ. ಎಸ್.ಎಸ್. ಅಂಗಡಿ, ಡಾ. ರವೀಂದ್ರ ಬೆಳ್ಳಿ ಮತ್ತಿತರರಿದ್ದಾರೆ.  
ಜಿಲ್ಲೆ

ಹಿಂಗಾರು ಹಂಗಾಮಿನ ವಲಯ ಸಂಶೋಧನೆ-ವಿಸ್ತರಣಾ ಕಾರ್ಯಾಗಾರ

Vijyapura - Parsuram Bhasagi

ವಿಜಯಪುರ: ಹವಾಮಾನ ವೈಪರೀತ್ಯದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಇಂಥ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವ, ಸುಲಭದಲ್ಲಿ ಅಳವಡಿಸಿಕೊಳ್ಳಬಹುದಾದ, ಕಡಿಮೆ ವೆಚ್ಚದ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ ವಿಜ್ಞಾನಿಗಳಿಗೆ ಹೇಳಿದರು.

ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ವಲಯ ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ರೈತರಿಗೆ ಬೇಕಾದ ತೃಣಧಾನ್ಯ, ಸಿರಿಧಾನ್ಯ, ದ್ವಿದಳಧಾನ್ಯ ಸೂರ್ಯಕಾಂತಿಯಲ್ಲಿ ಅಧಿಕ ಇಳುವರಿ ನೀಡುವ ನೂತನ ತಳಿಗಳನ್ನು ಪರಿಚಯಿಸಬೇಕು. ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಆ ಬಗ್ಗೆ ಸಂಶೋಧನೆಯಾಗಬೇಕು. ಪ್ರವಾಹ, ಸವಳು ಜಮೀನು, ವಿವಿಧ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯವ ತಳಿಗಳ ಅಭಿವೃದ್ಧಿಪಡಿಸಬೇಕು ಎಂದರು.

ವಿಜ್ಞಾನಿಗಳ ನಡೆ, ರೈತರ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಇದರಂತೆ ಪ್ರತಿ ತಿಂಗಳು ಮೊದಲ ಹಾಗೂ ಮೂರನೇ ಸೋಮವಾರ ತಾಲೂಕಿನ ಪ್ರತಿ ಹೋಬಳಿಯ ಒಂದು ಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿ ರೈತರೊಂದಿಗೆ ಚರ್ಚಿಸಬೇಕು. ಇದರಲ್ಲಿ ವಿಜ್ಞಾನಿಗಳು, ಇಲಾಖಾ ಅಧಿಕಾರಿಗಳು ಇರಬೇಕು. ರೈತರಿಗೆ ಸೂಕ್ತ ತಾಂತ್ರಿಕ ಜ್ಞಾನ ನೀಡಬೇಕು ಎಂಬ ಸಲಹೆ ನೀಡಿದರು.

ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಮಾತನಾಡಿ, ಈ ಭಾಗದಲ್ಲಿ ವಿವಿಧ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಜಾಗೃತಿವಹಿಸಬೇಕು. ಸಂಶೋಧನಾ ತಾಕುಗಳಿಗೆ ಖಡ್ಡಾಯವಾಗಿ ಕಾಂಪೋಸ್ಟ್, ಎರೆಗೊಬ್ಬರ ಬಳಸಬೇಕ, ಬರ ನಿರೋಧಕ, ಕೀಟ, ರೋಗ ನೀರೋಧಕ ತಳಿ ಅಭಿವೃದ್ಧಿಗೆ ಆಧ್ಯೆತೆ ನೀಡಬೇಕು ಎಂದರು.

ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಮಾತನಾಡಿ, ಬರುವ ಕೃಷಿ ವಿವಿ ಧಾರವಾಡದಲ್ಲಿ ಸೆ.9 ರಿಂದ 12 ರವರೆಗೆ ಜರುಗುವ ಕೃಷಿ ಮೇಳದಲ್ಲಿ ಸುಸ್ಥಿರ ಕೃಷಿಗೆ ಸಿರಿಧಾನ್ಯಗಳು ಕುರಿತ ಘೋಷವಾಕ್ಯದೊಂದಿಗೆ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಎಲ್ಲಾ ರೈತರು ಭಾಗವಹಿಸುವಂತೆ ತಿಳಿಸಬೇಕು ಎಂದರು.

ಸಹ ಸಂಶೋಧನಾ ನಿರ್ದೇಶಕ ಡಾ. ಶೇಖರಪ್ಪ, ಡಾ. ಕೃಷ್ಣರಾಜ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮತ್ತು ಡಾ. ಎಸ್. ಎಸ್. ಗದ್ದನಕೇರಿ ಕ್ಷೇತ್ರ ಸಮಸ್ಯೆಗಳನ್ನು ಕುರಿತು ವಿಷಯ ಮಂಡಿಸಿದರು.

ಧಾರವಾಡ ಕೃಷಿ ವಿವಿ 7 ಜಿಲ್ಲೆ ವ್ಯಾಪ್ತಿಯ ವಿಜ್ಞಾನಿಗಳು, ಕೃಷಿ ವಿವಿ ಅಧಿಕಾರಿಗಳಾದ ಡಾ. ರವಿ ಹುಂಜೆ, ಡಾ.ಪಿ.ವಿ. ಪಾಟೀಲ, ಡಾ. ಐ. ಕಾಳಪ್ಪನವರ ಮತ್ತಿತರರಿದ್ದರು.