ಜಿಲ್ಲೆ

ಕಡಿಮೆಯಾಗದ ಚಳಿ ಕಚಗುಳಿ

Dakshina Kannada

- ಭರತ್ ಶೆಟ್ಟಿಗಾರ್, ಮಂಗಳೂರು

ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಮಳೆ, ಬೇಸಿಗೆ, ಚಳಿಗಾಲ ವಿಳಂಬ ಅಥವಾ ಅವಧಿಗೆ ಮುನ್ನವೇ ಕಾಣಿಸಿಕೊಳ್ಳುತ್ತಿದೆ. ಕರಾವಳಿಯಲ್ಲೂ ಇತ್ತೀಚಿನ ವರ್ಷಗಳಲ್ಲಿ ಇದು ಸಾಮಾನ್ಯ. ಮಳೆಗಾಲದಲ್ಲೇ ಬೇಸಿಗೆಯ ಬಿಸಿ, ನಿಗದಿತ ಅವಧಿಗೆ ಸುರಿಯದ ಮುಂಗಾರು, ಅಕಾಲಿಕ ಮಳೆ, ಚಳಿ ಇಲ್ಲದ ಚಳಿಗಾಲವನ್ನು ಕಾಣಬಹುಛ್ಠ.

ನಿಧಾನವಾಗಿ ಬೇಸಿಗೆಯ ದಿನಗಳು ಆರಂಭವಾದರೂ, ಜಿಲ್ಲೆಯಲ್ಲಿ ಚಳಿ ಇನ್ನೂ ದೂರವಾಗಿಲ್ಲ ಎನ್ನಬಹುದು. ಹಗಲು ವೇಳೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಬೆಳಗ್ಗೆ ಚಳಿಗಾಳಿಯ ಕಚಗುಳಿ ಇರುತ್ತಿದೆ. ಕೆಲವು ದಿನ ಬೆಳಗ್ಗೆ 10 ಗಂಟೆಯವರೆಗೂ ಚಳಿಗಾಳಿ ಬೀಸುತ್ತಿರುತ್ತದೆ. ಇನ್ನು ಕೆಲವು ದಿನ ಚಳಿ ಇರುವುದೇ ಇಲ್ಲ. ಬೆಳಗ್ಗಿನ ಚಳಿ ಡಿಸೆಂಬರ್ ತಿಂಗಳ ಚಳಿಯನ್ನು ನೆನಪಿಸುವಂತೆ ಮಾಡುತ್ತಿದೆ. ತಣ್ಣನೆಯ ಚಳಿ ಇರಬೇಕಾದ ಡಿಸೆಂಬರ್‌ನಲ್ಲಿ ಈ ಬಾರಿ ಚಳಿಯೇ ಇರಲಿಲ್ಲ ಎನ್ನುವುದು ವಿಶೇಷ.

ಜನವರಿ ತಿಂಗಳಲ್ಲಿ ಕೆಲವು ದಿನಗಳು ಚಳಿಯ ದಿನಗಳಾಗಿತ್ತು. ಆ ಬಳಿಕ ಚಳಿ ಕಡಿಮೆಯಾಗಿದ್ದು, ಈಗ ಫೆಬ್ರವರಿಯಲ್ಲಿ ಕೆಲವು ದಿನಗಳಿಂದ ಮತ್ತೆ ಚಳಿ ಆರಂಭವಾಗಿದೆ. ಮುಖ್ಯವಾಗಿ ಬೆಳಗ್ಗಿನಿಂದಲೇ ತಣ್ಣನೆಯ ಗಾಳಿ ಬೀಸುವುದರಿಂದ ಚಳಿ ತೀವ್ರತೆ ಹೆಚ್ಚಾಗಿದೆ. ಸುಮಾರು 9-10 ಗಂಟೆಯವರೆಗೂ ಇರುತ್ತದೆ. ಆ ಬಳಿಕ ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತದೆ. ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ತಾಪಮಾನ 20ಕ್ಕಿಂತಲೂ ಕಡಿಮೆಯಾಗಿದ್ದು, ಭಾನುವಾರ 19.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಕಡಿಮೆ. ಪ್ರಸ್ತುತ ಆಕಾಶದಲ್ಲಿ ಮೋಡದ ಚಲನೆ ಇಲ್ಲದೆ, ಶುಭ್ರ ಆಕಾಶ ಇದೆ. ಪರಿಣಾಮ ರಾತ್ರಿಯಿಂದ ಮುಂಜಾನೆವರೆಗೆ ತಾಪಮಾನದಲ್ಲಿ ಇಳಿಕೆಯಾಗುತ್ತಿದೆ. ಒಣ ಹವೆ ಇರುವುದರಿಂದ ಈ ರೀತಿ ಆಗುತ್ತದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

ಫೆಬ್ರವರಿ ಕನಿಷ್ಠ ತಾಪಮಾನ: ದ.ಕ.ಜಿಲ್ಲೆಯಲ್ಲಿ ಫೆಬ್ರವರಿಯಲ್ಲಿ ಈವರೆಗಿನ ಕನಿಷ್ಠ ತಾಪಮಾನ 17.5 ಡಿಗ್ರಿ ಸೆಲ್ಸಿಯಸ್ 1972ರ ಫೆಬ್ರವರಿ 16ರಂದು ದಾಖಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅಂದರೆ 2011ರಲ್ಲಿ 18.5 ಡಿ.ಸೆ., 2018ರಲ್ಲಿ 19.4 ಮತ್ತು 2010ರಲ್ಲಿ 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾವಿತ್ತು. ಉಳಿದಂತೆ ಇತರ ವರ್ಷಗಳಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿಗಿಂತ ಹೆಚ್ಚೇ ವರದಿಯಾಗಿದೆ.

ಕರಾವಳಿ ಭಾಗದಲ್ಲಿ ಪ್ರಸ್ತುತ ಶುಭ್ರ ಆಕಾಶವಿದ್ದು, ಒಣಹವೆ ಕಂಡುಬರುತ್ತಿದೆ. ಪರಿಣಾಮ, ಹಗಲು ವೇಳೆ ಉತ್ತಮ ಬಿಸಿಲು ಹಾಗೂ ರಾತ್ರಿ, ಮುಂಜಾನೆ ವೇಳೆ ತಣ್ಣನೆಯ ವಾತಾವರಣ ಇರಲಿದೆ. ಮುಂದಿನ ಕೆಲವು ದಿನ ಇದೇ ರೀತಿ ಮುಂದುವರಿಯಲಿದೆ.

- ಡಾ.ಸಿ.ಎಸ್.ಪಾಟೀಲ್, ಹವಾಮಾನ ಕೇಂದ್ರ ನಿರ್ದೇಶಕ, ಬೆಂಗಳೂರು