ಸದೇಶ್ ಕಾರ್ಮಾಡ್ ಮೈಸೂರು
ಎಲೆಗಳನ್ನು ಭಾರಿ ಪ್ರಮಾಣದಲ್ಲಿ ಉದುರಿಸುವ ಮರಗಳು ನಗರ ಪಾಲಿಕೆಗೆ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ತಲೆನೋವು ತಂದಿದೆ. ಪ್ರತಿಯೊಂದು ರಸ್ತೆಗಳಲ್ಲೂ ರಾಶಿ ರಾಶಿ ಕಸ ಸಂಗ್ರಹವಾಗುತ್ತಿದ್ದು, ಕೆಲವರು ಈ ತ್ಯಾಜ್ಯಕ್ಕೆ ಬೆಳಗಿನ ಜಾವ ಬೆಂಕಿ ಹಚ್ಚುತ್ತಿರುವ ಪರಿಣಾಮ ನಗರದ ವಾತಾವರಣ ಕಲುಷಿತಗೊಳ್ಳುತಿದೆ.
ಮರಗಳು ಶಿಶಿರ ಋತುವಿನಲ್ಲಿ ಎಲೆಗಳನ್ನು ಉದುರಿಸಲು ಪ್ರಾರಂಭಿಸಿ ವಸಂತ ಋತುವಿನಲ್ಲಿ (ಮಾರ್ಚ್) ಚಿಗುರಲು ಪ್ರಾರಂಭಿಸುತ್ತವೆ. ಮಾರ್ಚ್‌ವರೆಗೆ ಮರಗಳು ಭಾರಿ ಪ್ರಮಾಣದಲ್ಲಿ ಎಲೆಗಳನ್ನು ಉದುರಿಸುತ್ತವೆ. ಒಂದು ಬಾರಿ ರಸ್ತೆಯನ್ನು ಶುಚಿಗೊಳಿಸಿ ಒಂದು ಗಂಟೆ ಬಿಟ್ಟು ನೋಡಿದರೆ ಅಷ್ಟೇ ಪ್ರಮಾಣದ ಎಲೆಗಳ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ರೀತಿ ಸಂಗ್ರಹವಾಗುತ್ತಿರುವ ಎಲೆಗಳಿಗೆ ಕೆಲವರು ಬೆಂಕಿ ಹಚ್ಚಿ ಬೆಳಗ್ಗೆ ಮೈ ಚಳಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಬೆಳಗ್ಗಿನ ಜಾವ ಎಲ್ಲೆಂದರಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ. ಬೆಂಕಿ ಹಚ್ಚಿದ ಜಾಗದ ಸುತ್ತಮುತ್ತ ಇರುವ ಜನರು ನೆಮ್ಮದಿಯಾಗಿ ಉಸಿರಾಡಲು ಸಹ ಸಾಧ್ಯವಾಗದ ವಾತಾವರಣ ನಿರ್ಮಾಣಗೊಂಡಿ ದೆ.
ನಗರ ಪಾಲಿಕೆ ಎಲ್ಲೆಂದರಲ್ಲಿ ತ್ಯಾಜ್ಯ ಹರಡುವವರಿಗೆ ಈಗಾಗಲೇ ದಂಡ ವಿಧಿಸಿ ಎಚ್ಚರಿಕೆ ನೀಡಿದ ನಂತರ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ, ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರಿಗೆ ದಂಡ ವಿಧಿಸದೆ ಇರುವ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮನೆಗಳ ಆವರಣದಲ್ಲಿ ಬೆಳೆದಿರುವ ಮರಗಳು ಉದುರಿಸುವ ಎಲೆಗಳನ್ನು ಕೆಲವರು ಮನೆ ಆವರಣದಲ್ಲಿಯೇ ಒಟ್ಟುಗೂಡಿಸಿ ಬೆಂಕಿ ಹಚ್ಚುತ್ತಿದ್ದು, ಇನ್ನು ಕೆಲವರು ರಸ್ತೆಗೆ ತಂದು ಬೆಂಕಿ ಹಚ್ಚುತ್ತಿದ್ದಾರೆ.
ತಾಜ್ಯಕ್ಕೆ ಬೆಂಕಿ ಹಚ್ಚಬಾರದೆಂದು ನಗರ ಪಾಲಿಕೆಯು ಪೌರಕಾರ್ಮಿಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆದರೆ, ಕೆಲವು ಪೌರ ಕಾರ್ಮಿಕರೂ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ನಗರ ಪಾಲಿಕೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಆಟೋ ಟಿಪ್ಪರ್‌ಗಳು ಇಲ್ಲ. ಹೀಗಾಗಿ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಳ್ಳು ಗಾಡಿಯನ್ನೇ ಆಶ್ರಯಿಸಿದ್ದಾರೆ. ಸಾಕಷ್ಟು ತಳ್ಳು ಗಾಡಿಗಳು ತಳ್ಳಿದರೂ ಮುಂದೆ ಸಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತಳ್ಳಲು ಸಾಧ್ಯವಾಗದೆ ಪೌರ ಕಾರ್ಮಿಕರು ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂಬ ಆರೋಪ ಇದೆ.
ಸ್ವಚ್ಛತೆಯಲ್ಲಿ ನಗರ ಎರಡು ಬಾರಿ ನಂ.1 ಸ್ಥಾನ ಪಡೆದರೂ ಪಾಲಿಕೆಯಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯವಾದ ಉಪಕರಣಗಳೇ ಇಲ್ಲ. ನಗರಕ್ಕೆ ಒಟ್ಟು 150 ಆಟೋ ಟಿಪ್ಪರ್‌ಗಳ ಅವಶ್ಯಕತೆ ಇದೆ. ಆಟೋ ಟಿಪ್ಪರ್‌ಅನ್ನು ಶೀಘ್ರ ಖರೀದಿಸಲಾಗುವುದೆಂದು ಭರವಸೆ ನೀಡಿ ಮೂರ‌್ನಾಲ್ಕು ತಿಂಗಳು ಕಳೆದು ಹೋಗಿದೆ. ಇರುವ ಅತ್ಯಲ್ಪ ವ್ಯವಸ್ಥೆಯಲ್ಲಿಯೇ ನಗರವನ್ನು ಶುಚಿಗೊಳಿಸುವ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲೆ ಬಿದ್ದಿದೆ.
ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ವಾತಾವರಣವನ್ನು ಕಲುಷಿತಗೊಳಿಸಬಾರದೆಂದು ಪೌರಕಾರ್ಮಿಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಪೌರಕಾರ್ಮಿಕರು ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಸಾಧ್ಯತೆ ಕಡಿಮೆ. ಚಳಿಗಾಲದಲ್ಲಿ ಮೈ ಕಾಯಿಸಿಕೊಳ್ಳಲು ಕೆಲವರು ಬೆಂಕಿ ಹಚ್ಚುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದು, ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮರಗಳ ಎಲೆಗಳನ್ನು ಸಾಧ್ಯವಾದಷ್ಟು ಆಯಾ ದಿನವೇ ವಿಲೇವಾರಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.
ಡಾ.ಡಿ.ಜಿ. ನಾಗರಾಜ್ ಪಾಲಿಕೆ ಆರೋಗ್ಯಾಧಿಕಾರಿ
ರಾಮಕೃಷ್ಣನಗರ ಜೆ ಬ್ಲಾಕ್‌ನಲ್ಲಿ ನಿತ್ಯ ಉದುರಿದ ಎಲೆಗಳನ್ನು ಸಂಗ್ರಹಿಸುವ ಪೌರಕಾರ್ಮಿಕರು, ಆರ್ಕಿಡ್ ಶಾಲೆ ಬಳಿ ಇರುವ ಕಂಟೈನರ್ ಸಮೀಪವೇ ಸುರಿದು ಮಧ್ಯಾಹ್ನದ ವೇಳೆಗೆ ಬೆಂಕಿ ಹಚ್ಚುತ್ತಿದ್ದಾರೆ. ಅಲ್ಲದೆ ಕಂಟೈನರ್ ಹಿಂಭಾಗವೇ ಪ್ಲಾಸ್ಟಿಕ್‌ಗಳ ರಾಶಿ ಹಾಕಿ ಬೆಂಕಿ ಹಚ್ಚುತ್ತಿದ್ದು, ಸುತ್ತಮುತ್ತಲ ನಿವಾಸಿಗಳು ದಿನವಿಡೀ ದುರ್ವಾಸನೆಯಿಂದ ನರಕಯಾತನೆ ನುಭವಿಸುವಂತಾಗಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು.
ಒಣಗಿ ಉದುರುವ ಎಲೆಗಳನ್ನು ಆಯಾ ವಾರ್ಡಿನ ಪಾರ್ಕ್‌ಗಳಲ್ಲಿ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಿ ಅಲ್ಲಿನ ಗಿಡಗಳಿಗೆ ಬಳಸುವ ಪದ್ಧತಿ ಈ ಹಿಂದೆ ಇತ್ತು. ಆದರೆ ಇದೀಗ ಕೆಲವೆಡೆ ಮಾತ್ರ ಇದು ಜಾರಿಯಲ್ಲಿದ್ದು, ಇತರೆಡೆಯೂ ಹೀಗೆ ಮಾಡಿದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ವಾಯು ಮಾಲಿನ್ಯಕ್ಕೂ ಕಡಿವಾಣ ಬೀಳುತ್ತದೆ.