- ಸದೇಶ್ ಕಾರ್ಮಾಡ್ ಮೈಸೂರು
ವರ್ಷಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಈ ಬಾರಿಯೂ ಮಾಗಿ ಉತ್ಸವವನ್ನು (ವಿಂಟರ್ ಫೆಸ್ಟಿವಲ್) ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು, ಇದರ ಜತೆಗೆ ವರ್ಷಾರಂಭದಲ್ಲಿ ಪ್ರವಾಸಿಗರನ್ನು ಸೆಳೆಯಲು ‘ಬ್ರ್ಯಾಂಡ್ ಮೈಸೂರು ಫೆಸ್ಟ್’ ಆಯೋಜಿಸಲು ತಯಾರಿ ನಡೆಯುತ್ತಿದೆ.
ವರ್ಷಾಂತ್ಯಕ್ಕೆ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಾಗಿ ಉತ್ಸವ ಆಕರ್ಷಣೆಯಾದರೆ, ವರ್ಷಾರಂಭದಲ್ಲಿ ಆಗಮಿಸುವ ಪ್ರವಾಸಿ ಗರಿಗೆ ‘ಬ್ರ್ಯಾಂಡ್ ಮೈಸೂರು ಫೆಸ್ಟ್’ ಮುದ ನೀಡಲಿದೆ. ಸಾಮಾನ್ಯವಾಗಿ ವರ್ಷಾಂತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಆ ನಂತರ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತದೆ. ಹೀಗಾಗಿ ಜನವರಿ ಮೊದಲ ಅಥವಾ ಎರಡನೇ ವಾರದಲ್ಲೂ ಪ್ರವಾಸಿ ಗರನ್ನು ಸೆಳೆಯಲು ‘ಬ್ರ್ಯಾಂಡ್ ಮೈಸೂರು ಫೆಸ್ಟ್’ ಆಯೋಜಿಸಲು ಉದ್ದೇಶಿಸಲಾಗಿದೆ.
- ಮೈಸೂರು ಅರಮನೆ ಮಂಡಳಿ ವತಿಯಿಂದ ಮಾಗಿ ಉತ್ಸವ, ಪ್ರವಾಸೋದ್ಯಮ ಇಲಾಖೆಯಿಂದ ‘ಬ್ರ್ಯಾಂಡ್ ಮೈಸೂರು ಫೆಸ್ಟ್’ ಆಯೋಜಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ 2020 ಹಾಗೂ 2021ರಲ್ಲಿ ಮಾಗಿ ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಕೋವಿಡ್ ನಂತರ ಪ್ರಥಮ ಬಾರಿಗೆ ಕಳೆದ ವರ್ಷ ನಡೆದ ಮಾಗಿ ಉತ್ಸವ ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿತು.
- ಮಾಗಿ ಉತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಬೊಂಬೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ದಿನಾಂಕ ಇನ್ನು ಅಂತಿಮಗೊಳ್ಳಬೇಕಾಗಿದೆ. ಡಿಸೆಂಬರ್ ಅಂತ್ಯದಲ್ಲಿ ಪ್ರತಿವರ್ಷ ಸಾಕಷ್ಟು ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಾರೆ. ಈ ಬಾರಿ ಡಿಸೆಂಬರ್ 30 ಹಾಗೂ 31 ಕ್ರಮವಾಗಿ ಶನಿವಾರ, ಭಾನುವಾರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಸಾಕಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
ಪ್ರತಿ ಬಾರಿ ಮಾಗಿ ಉತ್ಸವದಲ್ಲಿ ಕೇಕ್ ಉತ್ಸವವನ್ನು ಹೋಟೆಲ್ ಮಾಲೀಕರ ಸಂಘದ ಸಹಯೋಗದೊಂದಿಗೆ ಜಿಲ್ಲಾಡಳಿತ ಹಮ್ಮಿಕೊಳ್ಳುತಿತ್ತು. ಆದರೆ, ಕೇಕ್ ಉತ್ಸವ 2019ರಲ್ಲಿ ನಡೆದಿದ್ದೇ ಕೊನೆ. ಆ ನಂತರದ ಎರಡು ವರ್ಷಗಳು ಕೋವಿಡ್‌ನಲ್ಲಿ ಕಳೆದು ಹೋಯಿತು. 2022ರಲ್ಲಿ ಕೇಕ್ ಉತ್ಸವ ನಡೆದಿಲ್ಲ. ಈ ಬಾರಿಯೂ ಕೇಕ್ ಉತ್ಸವ ನಡೆಸಲು ಯಾವುದೇ ರೀತಿಯ ಸಭೆ ಹಾಗೂ ಚರ್ಚೆಗಳು ನಡೆದಿಲ್ಲ. ರಂದೀಪ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಮಾಗಿ ಉತ್ಸವದಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ, ಭದ್ರತೆಯ ಕಾರಣಕ್ಕೆ 2019ರಿಂದ ಓಪನ್ ಸ್ಟ್ರೀಟ್ ಫೆಸ್ಟಿವಲ್‌ಅನ್ನು ಕೈ ಬಿಡಲಾಯಿತು. ಅಭಿರಾಮ್ ಜಿ. ಶಂಕರ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಪಕ್ಷಿ ಹಬ್ಬ ಆಯೋಜಿಸಲಾಗಿತ್ತು. ಕಳೆದ ಬಾರಿ ಪಕ್ಷ ಹಬ್ಬವನ್ನೂ ಕೈಬಿಡಲಾಯಿತು.
- ಬ್ರ್ಯಾಂಡ್ ಮೈಸೂರು ಫೆಸ್ಟ್:
- ಪ್ರಥಮ ಬಾರಿಗೆ ನಗರದಲ್ಲಿ ‘ಬ್ರಾೃಂಡ್ ಮೈಸೂರು ಫೆಸ್ಟ್’ ಆಯೋಜಿಸಲು ತಯಾರಿ ನಡೆಯುತ್ತಿದೆ. ಎರಡು ದಿನಗಳ ಕಾಲ ಹಮ್ಮಿಕೊಳ್ಳುವ ಈ ಉತ್ಸವದಲ್ಲಿ ಮೈಸೂರು ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಸ್ಥಳ, ದಿನಾಂಕ ಹಾಗೂ ಕಾರ್ಯಕ್ರಮದ ರೂಪರೇಷೆ ಸಿದ್ಧಗೊಳ್ಳಲಿದೆ.
ಅರಮನೆ ಆವರಣದಲ್ಲಿ ವರ್ಷಾಂತ್ಯದಲ್ಲಿ ಮಾಗಿ ಉತ್ಸವ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಎಂದಿನಂತೆ ಈ ಬಾರಿಯೂ ಫಲಪುಷ್ಪ ಪ್ರದರ್ಶನ, ಬೊಂಬೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉತ್ಸವದ ದಿನಾಂಕವನ್ನು ಒಂದೆರಡು ದಿನಗಳ ಒಳಗೆ ಅಂತಿಮಗೊಳಿಸಲಾಗುವುದು.
ಟಿ.ಎಸ್. ಸುಬ್ರಹ್ಮಣ್ಯ, ಉಪ ನಿರ್ದೇಶಕ, ಅರಮನೆ ಮಂಡಳಿ
ಜನವರಿ ತಿಂಗಳಿನಲ್ಲಿ ಮೈಸೂರಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಪ್ರಥಮ ಬಾರಿಗೆ ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ‘ಬ್ರಾೃಂಡ್ ಮೈಸೂರು ಫೆಸ್ಟ್’ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ. ಎರಡು ದಿನಗಳ ಕಾಲ ಹಮ್ಮಿಕೊಳ್ಳುವ ಈ ಉತ್ಸವದಲ್ಲಿ ಮೈಸೂರಿನ ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು, ಮೈಸೂರಿನ ಬ್ರಾೃಂಡ್‌ಗಳ ಮಾರಾಟಕ್ಕೆ ಉತ್ತೇಜನ ನೀಡುವ ವೇದಿಕೆ ಒದಗಿಸಲಾಗುವುದು.
ಎಂ.ಕೆ. ಸವಿತಾ, ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
ಈ ಬಾರಿಯ ಮಾಗಿ ಉತ್ಸವದಲ್ಲಿ ಕೇಕ್ ಉತ್ಸವ ನಡೆಸುವ ವಿಚಾರದ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. 2019ರ ನಂತರ ಕೇಕ್ ಉತ್ಸವ ನಡೆಸಲು ಸಾಧ್ಯವಾಗಲಿಲ್ಲ. ಈ ಬಾರಿ ಕೇಕ್ ಉತ್ಸವ ನಡೆಸಲು ಪ್ರಯತ್ನ ನಡೆಸಲಾಗುವುದು. ಈ ಬಾರಿ ಮಾಗಿ ಉತ್ಸವದ ಜತೆಗೆ ಪ್ರವಾಸೋದ್ಯಮ ಇಲಾಖೆಯು ‘ಬ್ರಾೃಂಡ್ ಮೈಸೂರು ಫೆಸ್ಟ್’ ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಚಾರ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮೈಸೂರಿನತ್ತ ಸೆಳೆಯಬಹುದು.
ನಾರಾಯಣ ಗೌಡ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ