ಜಿಲ್ಲೆ

ಗೆಲುವಿನ ಓಟದತ್ತ ಜಾರಕಿಹೊಳಿ ಪೆನಲ್

ಪ್ರಶಾಂತ ಹೂಗಾರ

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಿರುವ ಯರಗಟ್ಟಿ ಕ್ಷೇತ್ರದಿಂದ ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ನನ್ನ ಗೆಲುವು ನಿಶ್ಚಿತವಾಗಿದೆ. ಈ ಮೂಲಕ ಜಾರಕಿಹೊಳಿ ಪೆನಲ್ ಗೆಲುವಿನ ಓಟ ಶುರುವಾಗಿದೆ. ನಾವು ಸ್ಪರ್ಧಿಸಿರುವ 13 ಸ್ಥಾನಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯ ನಾಮಪತ್ರ ಅವಧಿ ಕೊನೆಗೊಂಡ ಬಳಿಕ, ಯರಗಟ್ಟಿ ಕ್ಷೇತ್ರದಲ್ಲಿ ಏಕೈಕ ನಾಮಪತ್ರ ಸಲ್ಲಿಕೆ ಹಿನ್ನೆಲೆ ವಿಜಯ ಖಚಿತವೆಂದು ಅಭಿಮಾನಿಗಳು ಬ್ಯಾಂಕ್ ಆವರಣದಲ್ಲಿ ಕೈಗೊಂಡ ವಿಜಯೋತ್ಸವದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಆಶೀರ್ವಾದದಿಂದ ನನಗೆ ಈ ಜಯವಾಗಿದೆ. ಈ ಗೆಲುವನ್ನು ನಾನು ಯರಗಟ್ಟಿ ತಾಲೂಕಿನ ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ ನಾನೊಬ್ಬನೆ ಅಲ್ಲ, ಒಟ್ಟು ಆರು ಸ್ಥಾನಗಳಲ್ಲಿ ಗೆಲುವು ಖಚಿತವಾಗಿದೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕ್ಷೇತ್ರದ ಜನರ ವಿಶ್ವಾಸ: ನನಗೆ ಡಿಸಿಸಿ ಬ್ಯಾಂಕ್ ಕ್ಷೇತ್ರ ಹೊಸದು. ನಾನಾಗಿಯೇ ಸ್ಪರ್ಧೆ ಮಾಡಿಲ್ಲ. ನಮ್ಮ ಯರಗಟ್ಟಿ ತಾಲೂಕಿನ 34 ಸೊಸೈಟಿ ಮತ್ತು ಕಾರ್ಯಕರ್ತರ ಅಪೇಕ್ಷೆ ಮೇರೆಗೆ ನಾನು ಅಭ್ಯರ್ಥಿಯಾಗಿದ್ದೇನೆ. ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಸೊಸೈಟಿ ಸಭೆ ಮಾಡಿದ್ದೇವು. ಆಗ ಯಾರಾದರೂ ಅಭ್ಯರ್ಥಿಯಾದರೆ ಬೆಂಬಲ ಕೊಡುವುದಾಗಿ ಹೇಳಿದ್ದೆ. ಆ ಸಭೆಯಲ್ಲಿ ಎಲ್ಲರೂ ನೀವೆ ಅಭ್ಯರ್ಥಿಯಾಗಿ ಎಂದು ಆಗ್ರಹಿಸಿದರು. ಅಲ್ಲದೇ ಸೊಸೈಟಿಗೆ ಸದಸ್ಯನನ್ನಾಗಿಸಿ, ನಿರ್ದೇಶನನ್ನಾಗಿ ಮಾಡಿ, ಈಗ ಡಿಸಿಸಿ ಬ್ಯಾಂಕಿನವರೆಗೂ ತಂದು ನಿಲ್ಲಿಸಿದ್ದಾರೆ ಎಂದು ವಿವರಿಸಿದರು.

ಹೊಸ ಅನುಭವ: ಮೊದಲ ಸಲ ನಾನು ಡಿಸಿಸಿ ಬ್ಯಾಂಕ್ ಪ್ರವೇಶಿಸುತ್ತಿದ್ದೇನೆ. ನನಗೂ ಬಹಳ ಕುತೂಹಲವಿದೆ. ನನಗೆ ಇದು ಹೊಸದು, ಎಲ್ಲವನ್ನೂ ಕಲಿತುಕೊಂಡು ಕೆಲಸ ಮಾಡುವೆ.

ರೈತರಿಗೆ ಬರುವ ಸೌಲಭ್ಯ ಪ್ರಾಮಾಣಿಕವಾಗಿ ಒದಗಿಸಿಕೊಡುವೆ. ನಮ್ಮ ತಾಲೂಕಿನಲ್ಲಿ ಅನೇಕ ಕಡೆ ಪಿಕೆಪಿಎಸ್ ಸಂಘಗಳಿಲ್ಲ. ಈ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡುವೆ ಎಂದರು.