ವಿಜಯವಾಣಿ ಸುದ್ದಿಜಾಲ ಆನೇಕಲ್
ಮಹಿಳೆಯರಿಗಾಗಿ ವಿಜಯವಾಣಿ ಏರ್ಪಡಿಸಿದ್ದ ನಾರಿ ನಿನಗೊಂದು ಸ್ಯಾರಿ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಆನೇಕಲ್ ತಾಲೂಕು ವ್ಯಾಪ್ತಿಯ ಅದೃಷ್ಟಶಾಲಿಗಳನ್ನು ಪಟ್ಟಣದ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಸೌಧಾಮಿನಿ ಮಹಿಳಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಯಿತು.
ಪುರುಷರಂತೆ ಪ್ರತಿ ವಿಭಾಗದಲ್ಲೂ ಮಹಿಳೆ ಮುನ್ನಡೆಯಲು ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಸೌದಾಮಿನಿ ಮಹಿಳಾ ಮಂಡಳಿ ರಾಧಾಮಣಿ ಹೇಳಿದರು. ವಿಜಯವಾಣಿ ನಾರಿ ನಿನಗೊಂದು ಸ್ಯಾರಿ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಓದುವ ಹವ್ಯಾಸ ಹೆಚ್ಚಿಸುವ ಜತೆಗೆ ಮಹಿಳೆಯರಿಗೂ ಸ್ಪರ್ಧಾತ್ಮಕವಾಗಿ ಮುನ್ನಡೆಯಲು ಸಹಕಾರ ಆಗುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವುದು ಸ್ವಾಗತಾರ್ಹವಾಗಿದೆ ಎಂದರು.
ಅಚಾರ ವಿಚಾರಗಳ ಪರಿಚಯ:
ಪತ್ರಿಕೆಗಳಲ್ಲಿ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿದಾಗ ಓದುಗರಲ್ಲಿ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ಬರುತ್ತದೆ ಎಂದು ಸಂಘದ ಸದಸ್ಯೆ ಮಂಗಳಮ್ಮ ಅಭಿಪ್ರಾಯಪಟ್ಟರು. ಇತ್ತೀಚಿನ ದಿನಗಳಲ್ಲಿ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆ ಕಡೆಗೆ ಗಮನ ಕಡಿಮೆಯಾಗಿದೆ. ಪತ್ರಿಕೆಗಳಲ್ಲಿನ ವಸ್ತುನಿಷ್ಠಸುದ್ದಿಗಳನ್ನು ಓದುವ ನಿಟ್ಟಿನಲ್ಲಿ ವಿಜಯವಾಣಿ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಪ್ರತಿ ಕ್ಷೇತ್ರದಲ್ಲೂ ನಡೆಯುವ ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸಬೇಕು ಇಂಥ ಸ್ಪರ್ಧೆಗಳ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
.