ಜಿಲ್ಲೆ

ಬರಹದಲ್ಲಿ ಬದುಕು ಪ್ರತಿಲಿಸಿದಾಗ ಸಾಹಿತ್ಯ ಜೀವಂತ: ರಂಗಕರ್ಮಿ ಎಸ್​.ಎನ್​. ಸೇತೂರಾಮ್​ ಅಭಿಮತ

Bengaluru - General - Rama Kishan K V

ಬೆಂಗಳೂರು: ಬದುಕಿನ ಕಥೆಗಳು ಅಸ್ತಿತ್ವದ ಮೂಲವಾಗಿದ್ದು, ನಾವೇನು ಎಂಬುದನ್ನು ತಿಳಿಯಲು ನೆರವಾಗುತ್ತವೆ. ಬದುಕೇ ಬರಹವಾಗಿ ರೂಪುಗೊಂಡಾಗ ಸಾಹಿತ್ಯ ಜೀವಂತವಾಗಿರುತ್ತದೆ ಎಂದು ಹಿರಿಯ ರಂಗಕರ್ಮಿ ಎಸ್​.ಎನ್​. ಸೇತೂರಾಮ್​ ಹೇಳಿದ್ದಾರೆ.

ಬಸವನಗುಡಿಯ ನ್ಯಾಷನಲ್​ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಕ್ರಮ್​ ಪ್ರಕಾಶನ ಮತ್ತು ಸಮನ್ವಿತ ಪ್ರಕಾಶನ ಹೊರತಂದಿರುವ ವಿಂಗ್​ ಕಮಾಂಡರ್​ ಬಿ.ಎಸ್​. ಸುದರ್ಶನ್​ ಹಾಗೂ ಡಾ. ಗಣಪತಿ ಹೆಗಡೆ ಅವರ 4 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಸಮಾಜ ಸಾಗುತ್ತಿರುವ ದಿಕ್ಕು ನೋಡಿದರೆ ನೀತಿಕಥೆಗಳನ್ನು ಯಾರಿಗೆ ಬೋಧಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ಪ್ರತಿಯೊಂದು ವಿಚಾರದ ಮೂಲಾರ್ಥ ಕಳೆದುಕೊಂಡ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ನಮ್ಮ ಇತಿಹಾಸ ಸುಳ್ಳು ಹೇಳುತ್ತಿದೆ ಎಂಬ ವಾದ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಾಹಿತ್ಯದ ಮೂಲಕ ಸತ್ಯದ ಅನ್ವೇಷಣೆ ಆಗಬೇಕು ಎಂದರು.

ಇಂದಿನ ಕಾಲಟ್ಟದಲ್ಲಿ ಸಾಹಿತಿ ಮೊದಲು ಸ್ವಚ್ಛವಾಗಿ ಉಳಿಯಬೇಕು. ಬಳಿಕ ಸ್ವಚ್ಛವಾದ ಸಾಹಿತ್ಯದ ಮೂಲಕ ಸತ್ಯವನ್ನು ಬರೆಯಬೇಕು. ಲೇಖಕ ನಂಬಿಕೆ ಕಳೆದುಕೊಂಡರೆ ಆತನ ಬರಹ ಸಹಜವಾಗಿಯೇ ಮೌಲ್ಯ ಕಳೆದುಕೊಳ್ಳುತ್ತದೆ ಎಂದು ಹೇಳಿದರು.

ಆತ್ಮಾವಲೋಕನ ಅಗತ್ಯ

ನಾವು ಬದುಕುತ್ತಿರುವ ಸನ್ನಿವೇಶದಲ್ಲಿ ನೀತಿ ಪಾಠಗಳು ನ್ಯಾಯಾಲಯದಿಂದ ಆರಂಭವಾಗಬೇಕಾದ ಪರಿಸ್ಥಿತಿ ಇದೆ. ಪ್ರತಿಯೊಬ್ಬರೂ ಮೌಲ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಪಾಲಿಸುವವರು ಕಡಿಮೆ. ಹೀಗಿರುವಾಗ, ವ್ಯವಸ್ಥೆಯನ್ನು ಮುನ್ನಡೆಸುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸೇತೂರಾಮ್​ ಹೇಳಿದರು.

ಕಾರ್ಯಕ್ರಮದಲ್ಲಿ ವಿಸ್ತಾರ ಮೀಡಿಯಾದ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ಇಂಡಾಲಜಿಸ್ಟ್​ ಸದ್ಯೋಜಾತ ಭಟ್​, ಶಿಕ್ಷಣತಜ್ಞ ಡಾ.ಎನ್​. ರಾಮಚಂದ್ರಯ್ಯ, ಹಾಸ್ಯಸಾಹಿತಿ ಎಂ.ಎಸ್​. ನರಸಿಂಹಮೂರ್ತಿ, ಕೃತಿಕಾರರಾದ ವಿಂಗ್​ ಕಮಾಂಡರ್​ ಬಿ.ಎಸ್​. ಸುದರ್ಶನ್​, ಡಾ. ಗಣಪತಿ ಹೆಗಡೆ ಮತ್ತಿತರರಿದ್ದರು.

ಓದುಗರ ಅಭಿರುಚಿಗೆ ತಕ್ಕಂತಹ ಸಾಹಿತ್ಯ ಸೃಷ್ಟಿಯಲ್ಲಿ ಸೋಲುತ್ತಿದ್ದೇವೆಯೇ ಎಂದು ಲೇಖಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಬಂದೊದಗಿದೆ. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಏರುಪೇರು ಉಂಟಾಗಿದ್ದು, ಈ ಸಮಯದಲ್ಲಿ ಬೌದ್ಧಿಕ ಔನ್ನತ್ಯ ತಂದುಕೊಡುವ ಕೃತಿಗಳನ್ನು ಓದುವುದರಿಂದ ಒಳಿತಾಗಲಿದೆ.
-ಸುಚೇಂದ್ರ ಪ್ರಸಾದ್​, ಸಂಸ್ಕಾರ ಭಾರತಿ (ಕರ್ನಾಟಕ) ಅಧ್ಯಕ್ಷ