ಜಿಲ್ಲೆ

15 ದಿನಕ್ಕಾಗುವಷ್ಟು ಮದ್ಯ ಸ್ಟಾಕ್, ಮದ್ಯದಂಗಡಿಗೆ ಮುಗಿಬೀಳುವ ಆತಂಕ

Udupi

ಉಡುಪಿ: ಸರ್ಕಾರ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿ ಮಾಲೀಕರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮದ್ಯಪ್ರಿಯರನ್ನು ನಿಯಂತ್ರಿಸುವುದೇ ಸವಾಲಾಗಿದೆ.

ಉಡುಪಿ ಹೋಲ್‌ಸೇಲ್ ಮದ್ಯ ಡಿಪೋದಲ್ಲಿ 15 ದಿನಕ್ಕಾಗುವಷ್ಟು ಸ್ಟಾಕ್ ಇದೆ. ಎಲ್ಲ ಎಂಎಸ್‌ಐಎಲ್ ಮತ್ತು ಮದ್ಯದ ಅಂಗಡಿಗಳಲ್ಲಿ ವಾರಕ್ಕೆ ಆಗುವಷ್ಟು ಮದ್ಯ ಸ್ಟಾಕ್ ಇದ್ದು, ಯಾವುದೇ ಕಾರಣಕ್ಕೂ ಮದ್ಯಪ್ರಿಯರು ಮುಗಿಬೀಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಸ್ಟಾಕ್ ಪರಿಶೀಲನೆ: ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಜಿಲ್ಲೆಯ 103 ಮದ್ಯದಂಗಡಿಗಳಲ್ಲಿ ಓಪನಿಂಗ್ ಸ್ಟಾಕ್ ಪರಿಶೀಲನೆ ನಡೆಸುತ್ತಿದೆ. ಸೋಮವಾರದಿಂದಲೇ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿರುವುದರಿಂದ ಶನಿವಾರ ಸಾಯಂಕಾಲದಿಂದ ಮಧ್ಯರಾತ್ರಿವರೆಗೆ ಸೀಲ್ ತೆರೆದು ಸ್ಟಾಕ್ ಪರಿಶೀಲಿಸಿದ್ದಾರೆ. ಭಾನುವಾರವೂ ಮದ್ಯದಂಗಡಿಗಳ ಸ್ಟಾಕ್ ಪರಿಶೀಲನೆ ಕಾರ್ಯ ನಡೆದಿದೆ. ಭೌತಿಕ ದಾಸ್ತಾನು ಬಗ್ಗೆ ಎಲ್ಲಾ ಡಾಟವನ್ನು ಸಂಗ್ರಹಿಸಲಾಗುತ್ತಿದೆ. ಸಂಪೂರ್ಣ ಸ್ಟಾಕ್ ಪರಿಶೀಲನೆ ವರದಿ ರೆಡಿಯಾಗಲು ಒಂದು ವಾರ ಸಮಯವಕಾಶ ಇದೆ. ಕ್ಕಚಾರದ ಪ್ರಕಾರ ಒಂದು ಮದ್ಯದಂಗಡಿ ವ್ಯವಸ್ಥಿತ ಪರಿಶೀಲನೆ ನಡೆಸಲು ಎರಡು-ಮೂರು ಗಂಟೆ ಬೇಕು. ದೊಡ್ಡ ಮದ್ಯದಂಗಡಿಯಾದರೆ ಅರ್ಧ ದಿನವೇ ಬೇಕಾಗುತ್ತದೆ. ಈಗಾಗಲೇ ಮದ್ಯದಂಗಡಿಗಳಿಂದ ಸಂಗ್ರಹಿಸಿದ ಡಾಟವನ್ನು ವಾರದೊಳಗೆ ಕ್ಲೋಸಿಂಗ್ ಸ್ಟಾಕ್-ಓಪನಿಂಗ್

ಮಾರ್ಕ್, ಬ್ಯಾರಿಕೇಡ್ ಅಳವಡಿಕೆ: ಜಿಲ್ಲೆಯ ಎಲ್ಲ ಸ್ವರೂಪದ ಮದ್ಯದಂಗಡಿಗಳು ಸೋಮವಾರ ಮದ್ಯ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ. ಸೋಮವಾರದಿಂದ ಬೆಳಗ್ಗೆ ಮದ್ಯದಂಗಡಿ ತೆರೆಯುವ ಎಂದಿನ ಸಮಯದಂತೆ ತೆರೆದು, ಮಧ್ಯಾಹ್ನ 1 ಗಂಟೆವರೆಗೆ ವಹಿವಾಟು ನಡೆಸಲಿದೆ. ಭಾನುವಾರ ಮಧ್ಯಾಹ್ನದಿಂದ ಮದ್ಯದಂಗಡಿ ಆವರಣದಲ್ಲಿ ಆರು ಅಡಿ ಅಂತರಕ್ಕೆ ಮಾರ್ಕ್ ಹಾಕುವ ಕೆಲಸ, ಬ್ಯಾರಿಕೇಡ್‌ಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸ್ಟಾಕ್ ಪರಿಶೀಲನೆ ಜತೆಯಲ್ಲಿ ಮಾರ್ಕ್, ಬ್ಯಾರಿಕೇಡ್ ಅಳವಡಿಕೆ, ಸ್ಯಾನಿಟೈಸರ್ ಬಳಕೆ ಬಗ್ಗೆ ನಿಗಾ ವಹಿಸುವುದು, ಸೂಚನೆ ನೀಡುವ ಜವಾಬ್ದಾರಿಯನ್ನೂ ಹೆಚ್ಚುವರಿ ವಹಿಸಲಾಗಿದೆ. ಎಲ್ಲ ಮದ್ಯದಂಗಡಿ ಮಾಲೀಕರಿಗೆ ಮದ್ಯ ಮಾರಾಟ ಮಳಿಗೆ ಆವರಣದ ಸರತಿ ಸಾಲನ್ನು ನಿಯಂತ್ರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮೂವರು ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಅಬಕಾರಿ ಇಲಾಖೆ ಸೂಚನೆ ನೀಡಿದೆ.

ಸ್ಟಾಕ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಮದ್ಯದ ಸ್ಟಾಕ್ ಕೊರತೆ ಇಲ್ಲ. ಈ ಬಗ್ಗೆ ಗೊಂದಲ ಬೇಡ, ಸ್ಟಾಕ್ ಇರುವುದಿಲ್ಲ, ಬೇಗನೆ ಖಾಲಿಯಾಗುತ್ತದೆ ಎಂಬ ಆತಂಕದಿಂದ ಮದ್ಯಪ್ರಿಯರು ಒಮ್ಮೆಲೆ ಮದ್ಯ ಖರೀದಿಗೆ ಮುಗಿಬೀಳುವುದು, ಕೇಸ್‌ಗಟ್ಟಲೆ ಮದ್ಯ ಖರೀದಿಸಿ ಸ್ಟಾಕ್ ಇರಿಸುವ ಅಗತ್ಯ ಇಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಉಡುಪಿ ಮತ್ತು ಕುಂದಾಪುರದಲ್ಲಿ ಪಾನಿಯ ನಿಗಮ ನಿಯಮಿತ (ಕೆಎಸ್‌ಡಿಸಿಎಲ್) ಡಿಪೋ ಇದ್ದು, ಇಲ್ಲಿ 15 ದಿನಕ್ಕೆ ಸಾಕಾಗುವಷ್ಟು ಬಿಯರ್ ಮತ್ತು ವಿವಿಧ ಸ್ವರೂಪದ ಮದ್ಯ ದಾಸ್ತಾನು ಇದೆ. ಮದ್ಯದ ಅಂಗಡಿಗಳಲ್ಲಿಯೂ ವಾರಕ್ಕೆ ಆಗುವಷ್ಟು ಸ್ಟಾಕ್ ಇದೆ. ನಿಯಮದಂತೆ ಒಬ್ಬ ವ್ಯಕ್ತಿ 2.3 ಲೀಟರ್ ಮದ್ಯ, 18.2 ಲೀಟರ್ ಬಿಯರ್ ಖರೀದಿಸಲು ಅವಕಾಶ ಇದೆ. ಇದಕ್ಕಿಂತ ಹೆಚ್ಚು ಖರೀದಿಸಲು ಅವಕಾಶ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ಮದ್ಯದಂಗಡಿ ಮಾಲೀಕರು, ಮದ್ಯ ಖರೀದಿ ಮಾಡುವವರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮದ್ಯ ಕೊಂಡುಕೊಳ್ಳುವರು, ಮದ್ಯ ಮಾರಾಟ ಮಾಡುವವರು ಸ್ಯಾನಿಟೈಸರ್ ಬಳಕೆ ಮಾಡಬೇಕು. ಮಾಸ್ಕ್ ಕಡ್ಡಾಯ. ನಿಯಮಾವಳಿ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆ ಹಸಿರು ವಲಯದಲ್ಲಿ ಮುಂದುವರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು. ಇಲಾಖೆ ಅಧಿಕಾರಿಗಳಿಂದ ಸ್ಟಾಕ್ ಪರಿಶೀಲನೆ ಕಾರ್ಯ ನಡೆಯುತ್ತಿದೆ.

- ನಾಗೇಶ್ ಕುಮಾರ್, ಉಪ ಆಯುಕ್ತ, ಅಬಕಾರಿ ಇಲಾಖೆ, ಉಡುಪಿ ಜಿಲ್ಲೆ