ಜಿಲ್ಲೆ

ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿಭಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ : ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು. ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು, ಮಿಲಿಟರಿ ಕ್ಯಾಂಟೀನ್ ಸ್ಟೋರ್ಗಳ, ಡ್ಯೂಟಿ ಫ್ರೀ ಹೆಸರಿನಲ್ಲಿ ಬರುವ ನಕಲಿ ಮದ್ಯ, ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಗೋವಿಂದರಾಜ್ ಹೆಗ್ಡೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ರಾಜ್ಯದ ಸನ್ನದುದಾರರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸಂಬಂಧಿಸಿ ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಸೋಸಿಯೇಶನ್ ಎಲ್ಲಾ ಬೇಡಿಕೆಗಳನ್ನು 2024ರ ನವೆಂಬರ್ ತಿಂಗಳಿನಲ್ಲಿ ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ 5 ತಿಂಗಳು ಕಳೆದರೂ ಇನ್ನು ಕೂಡ ಯಾವುದೇ ಬೇಡಿಕೆ ಈಡೇರಿಸಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಜನಾರ್ದನ್ ಎಂ.ಪೂಜಾರಿ, ಉಡುಪಿ ತಾಲೂಕು ಗೌರವಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಕಾರ್ಕಳ ತಾಲೂಕು ಕೋಶಾಧಿಕಾರಿ ನವೀನ್ಚಂದ್ರ ಶೆಟ್ಟಿ, ಉಡುಪಿ ತಾಲೂಕು ಸಂಘಟನ ಕಾರ್ಯದರ್ಶಿ ಮಹೇಶ್ ಅಂಚನ್ ಕಟಪಾಡಿ, ಕುಂದಾಪುರ ತಾಲೂಕು ಖಜಾಂಚಿ ವಾದಿರಾಜ ಶೆಟ್ಟಿ, ಉಡುಪಿ ತಾಲೂಕು ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಕಾರ್ಕಳ ತಾಲೂಕು ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರಿಗೆ ಸಲ್ಲಿಸಲಾಯಿತು.