ಜಿಲ್ಲೆ

ಕುಮಟಾದಲ್ಲಿ ಗಾಳಿ, ಮಳೆ, ಸಿಡಿಲಿನ ಅಬ್ಬರ

ಬಸವರಾಜ ವೀರಪ್ಪ ಗರಗ

ಕುಮಟಾ: ತಾಲೂಕಿನಲ್ಲಿ ಬುಧವಾರ ಸಂಜೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಗುರುವಾರ ಮತ್ತಷ್ಟು ಜೋರಾಗಿದೆ. ಹಲವೆಡೆ ಗಾಳಿ-ಮಳೆ, ಸಿಡಿಲಿನ ಹೊಡೆತಕ್ಕೆ ಅಪಾರ ಹಾನಿ ಸಂಭವಿಸಿದೆ.

ಪಟ್ಟಣದ ವನ್ನಳ್ಳಿಯಲ್ಲಿ ಸಿಡಿಲಿನ ಹೊಡೆತಕ್ಕೆ ದುಮಿಂಗ್ ಕೊಸ್ತಾ ಡಿಸೋಜಾ ಅವರ 5 ತೆಂಗಿನ ಮರ ಸುಟ್ಟುಹೋಗಿವೆ ಹಾಗೂ ಮನೆಗೂ ತೀವ್ರ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ಮಾಡಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಬೆಟ್ಕುಳಿಯಲ್ಲಿ ಜಯಶ್ರೀ ರಮೇಶ ನಾಯ್ಕ ಅವರ ಮನೆಯ ಛಾವಣಿಯ ಪಕಾಸು ಮುರಿದು ಇಡೀ ಛಾವಣಿ ಬಿದ್ದು 45 ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು ಅದೃಷ್ಟವಶಾತ್ ಯಾರಿಗೂ ಪೆಟ್ಟಾಗಿಲ್ಲ. ಕಲಭಾಗ ಪಂಚಾಯಿತಿ ವ್ಯಾಪ್ತಿಯ ಅಳ್ವೆದಂಡೆಯಲ್ಲಿ ದತ್ತಾತ್ರೇಯ ಕುರ್ಲೆ ಅವರ ಮನೆ ಹಿಂದುಗಡೆಯ ಗದ್ದೆ ನೀರು ಕಟ್ಟಿಕೊಂಡು ಮನೆಯೊಳಗೆ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ದವಸ-ಧಾನ್ಯ ಸಹಿತ ಹೆಚ್ಚಿನ ಸಾಮಾನುಗಳು ಹಾನಿಯಾಗಿವೆ.

ಸನಿಹದ ಶ್ಯಾಮ ಪಟ್ಕುರೆ ಅವರ ಕಾಂಪೌಂಡ್ ಗೋಡೆಗಳು ಬಿದ್ದು ಹಾನಿಯಾಗಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಬಾವಿಕೊಡ್ಲದ ದುಬ್ಬನಶಶಿಯಲ್ಲಿ ಕಾಮಾಕ್ಷಿ ರಘು ಚೋಪಡೆಕರ್ ಅವರ ಮನೆಯ ಮೇಲ್ಛಾವಣಿ ಸಹಿತ ಮಣ್ಣಿನ ಗೋಡೆಗಳು ಕುಸಿದು ಬಿದ್ದಿವೆ. ಘಟನೆಯಲ್ಲಿ ಜನ-ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ.