ಜಿಲ್ಲೆ

ಯುಸಿಎಸ್​ಎಲ್​ನ 'ವಿಲ್ಸನ್​ ಇಕೊ-3' ನೌಕೆ ಅನಾವರಣ

ಉಡುಪಿ ಕಿರೀಟದಲ್ಲಿದೆ ಮುತ್ತಿನಂತಹ ಉದ್ಯಮ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಬಣ್ಣನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮೇಕ್​ ಇನ್​ ಇಂಡಿಯಾ, ಆತ್ಮ ನಿರ್ಭರ ಭಾರತ ಯೋಜನೆಗಳು ಹೊಸ ಹೊಸ ಕೈಗಾರಿಕೆ ಹಾಗೂ ಉದ್ಯಮಗಳ ಭಾರತಕ್ಕೆ ಪೂರಕವಾಗಿದೆ. ಅವುಗಳನ್ನು ಪರಿಸರ ರಕ್ಷಣೆಯೊಂದಿಗೆ ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಬೇಕು. ಉಡುಪಿಯ ಕಿರೀಟದಲ್ಲಿ ಮುತ್ತಿನಂತಹ ಉದ್ಯಮಗಳಿದ್ದು ಸೂಕ್ಷ್ಮ ಪರಿಸರ, ಜನರ ನೆಲೆಗಳನ್ನು ಮನಗಂಡು ಅಗತ್ಯ ಕೈಗಾರಿಕೆ ಸ್ಥಾಪನೆಯಾಗಿ ಸ್ಥಳೀಯರಿಗೆ ಉದ್ಯೋಗ ಲಭಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆಶಯ ವ್ಯಕ್ತಪಡಿಸಿದರು.

ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್​ ಶಿಪ್​ ಯಾರ್ಡ್​ ಲಿಮಿಟೆಡ್​ (ಯುಸಿಎಸ್​ಎಲ್​)ನ ಆವರಣದಲ್ಲಿ ನಾರ್ವೆಯ ಮೆಸರ್ಸ್​ ವಿಲ್ಸನ್​ ಎಎಸ್​ಎ ಸಂಸ್ಥೆಗಾಗಿ ನಿರ್ಮಿಸಿದ ವಿಲ್ಸನ್​ ಇಕೊ-3 ನೌಕೆಯನ್ನು ಸೆಪ್ಟೆಂಬರ್​ 6ರಂದು ಸಂಜೆ ಅನಾವರಣಗೊಳಿಸಿ ಮಾತನಾಡಿದರು.

ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ನೌಕೆಯನ್ನು ಅನಾವರಣ ಮಾಡಲಾಯಿತು. ವಿಲ್ಸನ್​ ಎಎಸ್​ಎ (ಡ್ರೆೃ ಲಾಕ್ಸ್​ ಆ್ಯಂಡ್​ ಪ್ರಾಜೆಕ್ಟ್​)ನ ಫ್ಲೀಟ್​ ಮೆನೇಜರ್​ ಗೇರ್​ ಓವ್​ ಕ್ವಲ್ಹೆಮ್​, ಸೈಟ್​ ಮೆನೇಜರ್​ ಸರ್ಗೆ ಬೊಗ್ದಾಶೊ, ಯುಸಿಎಸ್​ಎಲ್​ನ ಎಜಿಎಂ (ಡಿಸೈನ್​) ವಿ.ಲಲಿತಾದೇವಿ, ಎಜಿಎಂ ಗೋಕುಲ್​ ಪಿ.ಎನ್​., ಎಜಿಎಂ ಅಂಬಲ್​ ವಾನನ್​, ಮೆನೇಜರ್​ ಸಂತೋಷ ಎಚ್​.ಬಿ., ಪ್ರಜ್ವಲ್​ ಡಿ. ಸುವರ್ಣ, ವಿನಯಕುಮಾರ್​ ಎಂ. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೋಸ್ಟಲ್​ ವೇವ್ಸ್​ ಎಂಬ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು.

ಸಂಸ್ಥೆಯ ಸಿಇಒ ಹರಿಕುಮಾರ್​ ಸ್ವಾಗತಿಸಿದರು. ಸಿಎಫ್​ಒ ಶಂಕರ ನಟರಾಜ್​ ವಂದಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು. ನಾರ್ವೆಯ ಮೆಸರ್ಸ್​ ವಿಲ್ಸನ್​ ಎಎಸ್​ಎ ಜತೆ 3,800 ಟಿಡಿಡಬ್ಲು (ಟನ್ಸ್​ ಡೆಟ್​ ವೇಯ್ಟ್​) ಜನರಲ್​ ಕಾರ್ಗೊ ಸರಣಿಯಲ್ಲಿ ಆರು ನೌಕೆ ನಿಮಾರ್ಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಲ್ಸನ್​ ಇಕೊ-1ಅನ್ನು 2025ರ ಏ. 23ಕ್ಕೆ ಪೂರೈಕೆ ಮಾಡಲಾಗಿದೆ. ವಿಲ್ಸನ್​ ಇಕೊ-2 ಮಂಗಳೂರು ಬಂದರಿನಲ್ಲಿದ್ದು ಸೆ. 11ರಂದು ಪೂರೈಕೆ ಮಾಡಲಾಗುತ್ತಿದೆ. ಇಂದು ಅನಾವರಣಗೊಂಡಿದ್ದು 3ನೇಯದು. ಯುಸಿಎಸ್​ಎಲ್​ ಜತೆ ಇನ್ನೂ 6,300 ಟಿಡಿಡಬ್ಲು ಡ್ರೆೃ ಕಾಗೋರ್ 8 ನೌಕೆ ಒದಗಿಸಲು ಒಪ್ಪಂದ ಮಾಡಿಕೊಂಡಿದೆ. | ಗೇರ್​ ಓವ್​ ಕ್ವಲ್ಹೆಮ್​. ವಿಲ್ಸನ್​ ಎಎಸ್​ಎ ಫ್ಲೀಟ್​ ಮೇನೇಜರ್​

89.43ಮೀ. ಉದ್ದದ ಹಡಗು

ಯುಸಿಎಸ್​ಎಲ್​ 62 ಟನ್​ ಸಾಮರ್ಥ್ಯದ ಎರಡು ಹಾಗೂ 70 ಟನ್​ ಸಾಮರ್ಥ್ಯದ ಎರಡು ಬೊಲ್ಲಾರ್ಡ್​ ಪುಲ್​ ಟಗ್​ಗಳನ್ನು ಭಾರತದ ಪ್ರಖ್ಯಾತ ಟಗ್​ ಆಪರೇಟರ್​ಗಳಿಗೆ ಕೊಚ್ಚಿನ ಶಿಪ್​ ಯಾರ್ಡ್​ ಒದಗಿಸಿದೆ. ಯುಸಿಎಸ್​ಎಲ್​ನಿಂದ 70 ಟನ್​ ಸಾಮರ್ಥ್ಯದ ಬೊಲ್ಲಾಡ್​ ಪುಲ್​ 12 ಟಗ್ಸ್​ ನಿಮಾರ್ಣ ಹಂತಗಳಲ್ಲಿದೆ. ಪ್ರಸ್ತುತ ವಿಲ್ಸನ್​ ಇಕೊ-3 ನೌಕೆಯು 89.43ಮೀ. ಉದ್ದ ಇರುವುದು ವಿಶೇಷತೆಯಾಗಿದೆ. 13.2 ಮೀ. ಅಗಲ, 4.2 ಮೀ. ಎತ್ತರ ಹೊಂದಿದೆ. ನೆದರ್ಲೆಂಡ್​ನ ಕೊನೋಶಿಪ್​ ಇಂಟರ್​ನ್ಯಾಷನಲ್​ನವರು ವಿನ್ಯಾಸ ಮಾಡಿದ್ದಾರೆ. ಪರಿಸರ ಸ್ನೇಹಿ ಹಡಗು ಇದಾಗಿದ್ದು, ಡೀಸೆಲ್​ ಬಳಕೆ ಮಾಡಲಾಗುತ್ತಿದ್ದು, ಇಲೆಕ್ಟ್ರಿಕ್​ ಎಂಜಿನ್​ ಹೊಂದಿದೆ.