ಸಕಲೇಶಪುರ ತಾಲೂಕಿನ ಹಾನುಬಾಳ್ ಗ್ರಾಮದಲ್ಲಿ ಹಾನುಬಾಳು ಹೋಬಳಿ ನೂತನ ಬೆಳೆಗಾರರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಹಿರಿಯ ಬೆಳೆಗಾರರಾದ ಬಿಳಿಗೌಡರು ನೆರವೇರಿಸಿದರು. ಶಾಸಕ ಸಿಮೆಂಟ್ ಮಂಜು, ಎಂ.ಬಿ.ರಾಜೀವ್, ಎಚ್.ಎಂ.ವಿಶ್ವನಾಥ್, ಡಾ.ಮೋಹನ್ ಕುರ್ಮಾ, ಕೆ.ಬಿ.ಕೃಷ್ಣಪ್ಪ ಇತರರಿದ್ದರು. 
ಜಿಲ್ಲೆ

ಬೆಳೆಗಾರರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ

ಎಂ.ರವಿ

ಸಕಲೇಶಪುರ: ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.

ತಾಲೂಕಿನ ಹಾನುಬಾಳ್ ಗ್ರಾಮದಲ್ಲಿ ಶುಕ್ರವಾರ ಹಾನುಬಾಳು ಹೋಬಳಿ ನೂತನ ಬೆಳೆಗಾರರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಬೆಳೆಗಾರರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಪರಿಸರದ ಮೇಲೆ ಅರಣ್ಯ ಇಲಾಖೆಯವರಿಗಿಂತ ಹೆಚ್ಚಿನ ಪ್ರೀತಿ ಬೆಳೆಗಾರರಿಗಿದೆ. ಸೆಕ್ಷನ್ 4ರ ಸಮಸ್ಯೆ ಕುರಿತು ಅರಣ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಇಲ್ಲಿ ಯಾವ ರೀತಿಯ ರಾಜಕೀಯ ಬೇಡ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ. ಮುಖ್ಯಮಂತ್ರಿ ಅವರನ್ನು ಶೀಘ್ರವೇ ಭೇಟಿ ಮಾಡುತ್ತೇನೆ. ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ತೀರ್ಮಾನಿಸಲಾಗಿದ್ದು ಇದನ್ನು ಶೀಘ್ರವಾಗಿ ಮಾಡಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸಕಲೇಶಪುರದ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಆದರೆ ನಮ್ಮ ಸಮಸ್ಯೆ ಸಚಿವರಿಗೆ ಅರ್ಥ ಆಗುತ್ತೋ? ಇಲ್ಲವೋ? ಎಂಬ ಸಂಶಯ ಮೂಡಿದೆ. ಒಂದು ಕಾಯ್ದೆ ಆದಾಗ ಎಲ್ಲರೂ ಸಂತಸಪಡುತ್ತಾರೆ. ಆದರೆ ಆ ಕಾಯ್ದೆಯಲ್ಲಿ 20 ಕಂಡೀಷನ್ ಇರುವ ಬಗ್ಗೆ ನಾವು ಯಾರೂ ಗಮನಿಸಲ್ಲ. ಆದರೆ ಆ ಕಂಡೀಷನ್ ಆಧಾರದ ಮೇಲೆ ಅಧಿಕಾರಿ ಗಳು ನಮ್ಮನ್ನು ಆಟ ಆಡಿಸ್ತಾರೆ. ಹೀಗಾಗಿಯೇ ಸಮಸ್ಯೆ ಪರಿಹಾರವಾಗದೆ ಸಮಸ್ಯೆಯಾಗಿಯೇ ಉಳಿದಿದೆ ಎಂದು ಹೇಳಿದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ನಾವೆಲ್ಲರೂ ಅಭಿವೃದ್ಧಿ ಪಥದತ್ತ ಸಾಗುವ ಕುರಿತು ಚಿಂತನೆ ಮಾಡೋಣ ಎಂದು ಹೇಳಿದರು.
ಹಿರಿಯ ಬೆಳೆಗಾರರಾದ ಬಿಳಿಗೌಡರು ಕಟ್ಟಡವನ್ನು ಉದ್ಘಾಟಿಸಿದರು. ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ.ರಾಜೀವ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಮೋಹನ್ ಕುರ್ಮಾ, ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ರಮಣ್ಯ, ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್, ಹಾನುಬಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್.ಸಂತೋಷ್, ಗೌರವ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.