ಜಿಲ್ಲೆ

ಮಳೆಯ ಆರ್ಭಟ, ಮನೆ ಹಾನಿ ಸಂತ್ರಸ್ತರಿಗೆ ಸಿಗುವುದೇ ಪರಿಹಾರ?

ಮಂಜುನಾಥ ಅಂಗಡಿ ಧಾರವಾಡ
ಮುಂಗಾರು ಹಂಗಾಮಿನಲ್ಲಿ ಸತತ 5ನೇ ವರ್ಷ ಮಳೆಯ ಆರ್ಭಟ ಮುಂದುವರಿದಿದೆ. 2019ರಿಂದ 2022ರ ಅವಧಿಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರ ನಗದು ಪರಿಹಾರ ನೀಡಿದೆ. ಈ ವರ್ಷವೂ ಮನೆಗಳ ಹಾನಿ ಪ್ರಕರಣ ದಾಖಲಾಗಿದ್ದು, ಪರಿಹಾರ ಸಿಗುವುದೇ ಎಂಬ ಜಿಜ್ಞಾಸೆ ಮೂಡಿದೆ.


ರಾಜ್ಯಕ್ಕೆ ಈ ವರ್ಷದ ಮುಂಗಾರು ಪ್ರವೇಶ ವಿಳಂಬವಾಗಿತ್ತು. ನಂತರದ ದಿನಗಳಲ್ಲಿ ಹವಾಮಾನ ಇಲಾಖೆ ಮುಂಗಾರು ದುರ್ಬಲ ಎಂದಿತ್ತು. ಪರಿಣಾಮ ಜೂನ್​ನಿಂದ ಜುಲೈ 3ನೇ ವಾರದವರೆಗೆ ಬಿತ್ತನೆ ಕುಂಠಿತವಾಗಿತ್ತು. ಕಳೆದ ಒಂದು ವಾರದಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ನೀರಾವರಿ ವ್ಯವಸ್ಥೆ ಇರುವ ರೈತರು ಈಗಾಗಲೇ ಬಿತ್ತನೆ ಮಾಡಿದ್ದು, ಬೆಳೆಗಳಲ್ಲಿ ಹಲವಾರು ಕೀಟಬಾಧೆಗಳು ಕಾಣಿಸಿಕೊಂಡಿವೆ. ಹೆಚ್ಚಿನ ತೇವಾಂಶದಿಂದ ಬೆಳೆಗಳು ಹಾಳಾಗುತ್ತಿವೆ.


ಮತ್ತೊಂದೆಡೆ ನಗರ- ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ಹಾನಿ ಮುಂದುವರಿದಿದೆ. ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಮನೆ ಹಾನಿ ಮಾಹಿತಿ ತಿಳಿಯುತ್ತಲೇ ಗ್ರಾಮ ಆಡಳಿತಾಧಿಕಾರಿಗಳು ಹಾನಿಯಾದ ಮನೆಯ ಮುಂದೆ ಸಂತ್ರಸ್ತರೊಂದಿಗೆ ನಿಂತು, ಭಾವಚಿತ್ರ ತೆಗೆದು ತಾಲೂಕು ಆಡಳಿತಕ್ಕೆ ವರದಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 677 ಭಾಗಶಃ ಹಾನಿ, 15 ತೀವ್ರತರ ಹಾನಿಯಾಗಿರುವ ವರದಿಯಾಗಿದೆ.


2019ರ ಮಹಾ ಮಳೆಯ ಸಂದರ್ಭದಲ್ಲಿ ಹಾನಿಯಾದ ಮನೆಗಳಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಚ್ಚಿನ ಪರಿಹಾರ ಘೋಷಿಸಿದ್ದರು. 3 ಕೆಟಗರಿ ಮಾಡಿ ತೀವ್ರ ಹಾನಿಯಾದ ಮನೆಗಳಿಗೆ 5 ಲಕ್ಷ ರೂ., ಭಾಗಶಃ ಹಾನಿಯಾದ ಮನೆಯನ್ನು ತೆರವುಗೊಳಿಸಿ ಪುನರ್ ನಿರ್ವಿುಸಿಕೊಂಡರೆ 3 ಲಕ್ಷ ರೂ. ಅಲ್ಪಸ್ವಲ್ಪ ಹಾನಿಯಾದ ಮನೆಗೆ 50,000 ರೂ. ಪರಿಹಾರ ಘೋಷಿಸಿದ್ದರು. ಅದನ್ನು ರಾಜ್ಯಾದ್ಯಂತ ಸಮರ್ಪಕವಾಗಿ ಅನುಷ್ಠಾನ ಕೂಡ ಮಾಡಿದ್ದರು.


ಈಗಿನ ಸರ್ಕಾರ ಈವರೆಗೂ ಮನೆಗಳ ಹಾನಿಗೆ ಅಧಿಕೃತವಾಗಿ ಪರಿಹಾರ ಘೋಷಿಸಿಲ್ಲ. ಹಾನಿಯಾದ ಮನೆಗಳ ವರದಿ ಸಿದ್ಧ ಮಾಡಿಟ್ಟುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿಗಳು ನಿತ್ಯದ ಹಾನಿ ಪ್ರಕರಣಗಳನ್ನು ತಹಸೀಲ್ದಾರರಿಗೆ ಸಲ್ಲಿಸುತ್ತಿದ್ದಾರೆ. ಆದರೆ, ಹಾನಿಯನ್ನು ವರ್ಗೀಕರಿಸಿ ಕೆಟಗರಿ ದಾಖಲಿಸುವ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ತಂತ್ರಾಂಶ ಇನ್ನೂ ಆರಂಭಗೊಂಡಿಲ್ಲ.


ನೇಮಕಗೊಂಡಿಲ್ಲ ಅಧಿಕಾರಿಗಳು
ಗ್ರಾಮ ಆಡಳಿತಾಧಿಕಾರಿಗಳು ವರದಿ ಮಾಡಿದ ಹಾನಿ ಪ್ರಕರಣಗಳನ್ನು ಪರಿಶೀಲಿಸಲು ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಪರಿಶೀಲನೆಗೆ ಇನ್ನೂ ನೇಮಿಸಿಲ್ಲ. ಪಿಆರ್​ಇಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿ ವಿವಿಧ ಇಂಜಿನಿಯರ್​ಗಳನ್ನು ಪರಿಶೀಲನೆಗೆ ನೇಮಿಸಬೇಕಿದೆ. ಅವರು ಹಾನಿಯಾದ ಮನೆಗಳನ್ನು ಪರಿಶೀಲಿಸಿ ಹಾನಿ ಪ್ರಮಾಣ ದಾಖಲಿಸಿದ ನಂತರ ತಹಸೀಲ್ದಾರರು ತಮ್ಮ ಲಾಗಿನ್​ನಲ್ಲಿ ಕೆಟಗರಿಗಳನ್ನು ದಾಖಲಿಸುತ್ತಾರೆ. ತಹಸೀಲ್ದಾರರಿಂದ ಆರ್​ಜಿಆರ್​ಎಚ್​ಸಿಎಲ್ ತಂತ್ರಾಂಶದಲ್ಲಿ ಕೆಟಗರಿ ನಮೂದಾಗಿ ಅನುಮೋದನೆ ನೀಡುತ್ತಾರೆ. ಜಿಲ್ಲಾಧಿಕಾರಿಗಳು ಅಂತಿಮ ಅನುಮೋದನೆ ನೀಡಿ, ನಿಗಮಕ್ಕೆ ಕಳುಹಿಸುತ್ತಾರೆ. ಆದರೆ, ಈ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಹಾನಿಯಾದ ಮನೆಗಳಿಗೆ ಹಿಂದಿನ ಸರ್ಕಾರ ನೀಡಿದಂತೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಸಂತ್ರಸ್ತರ ಒತ್ತಾಯ.

ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಅಲ್ಲಲ್ಲಿ ಮನೆಗಳು ಹಾನಿಗೊಳಗಾತ್ತಿವೆ. ಗ್ರಾಮ ಆಡಳಿತಾಧಿಕಾರಿಗಳು ಮನೆ ಹಾನಿ ಪ್ರಕರಣಗಳ ಪರಿಶೀಲನೆ ನಡೆಸಿ, ವರದಿ ಮಾಡುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. - ಗುರುದತ್ತ ಹೆಗಡೆ ಜಿಲ್ಲಾಧಿಕಾರಿ