* ಮಂತ್ರಿಗಿರಿ ರೇಸ್ನಲ್ಲಿ ಬಾಲಕೃಷ್ಣ
* ಜಿಲ್ಲಾ ಉಸ್ತುವಾರಿ ಬದಲಾವಣೆ ಸಾಧ್ಯತೆ
ಗಂಗಾಧರ್ ಬೈರಾಪಟ್ಟಣ ರಾಮನಗರ ನವೆಂಬರ್ ಕ್ರಾಂತಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಷಯ. ಈ ವಿಚಾರವೇ ಜಿಲ್ಲೆಯಲ್ಲಿ ‘ಭಾರಿ ಚರ್ಚೆಗಳಿಗೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣ, ನವೆಂಬರ್ನಲ್ಲಿ ನಡೆಯಬಹುದಾದ ಕ್ರಾಂತಿಯ ನಂತರದ ಅಧಿಕಾರ ಬದಲಾವಣೆಯಲ್ಲಿ ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಷಯ ಮುಂಚೂಣಿಯಲ್ಲಿದ್ದರೆ, ಹೊಸ ಸರ್ಕಾರದಲ್ಲಿ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಮಂತ್ರಿಗಿರಿ ದೊರೆಯಲಿದೆ ಎನ್ನುವ ಲೆಕ್ಕಾಚಾರವೂ ಆರಂಭಗೊಂಡಿದೆ.
ಕೆಲವರ ರಾಜಕೀಯ ತಂತ್ರದಿಂದಾಗಿ 1994ರಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಬಿಟ್ಟರೆ ಉಳಿದಂತೆ ಪಕ್ಷ ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಹಾಗೂ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡು ಹೋರಾಟ ಮಾಡಿ ಅದನ್ನು ಪರಿಹರಿಸಿದ ಕೀರ್ತಿ ಡಿ.ಕೆ.ಶಿವಕುಮಾರ್ ಅವರದು. ಪಕ್ಷಕ್ಕಾಗಿ 43 ವರ್ಷಗಳಿಂದಲೂ ದುಡಿಯುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ನಿರೀಕ್ಷಿತ ಹುದ್ದೆ ಸಿಗಲಿಲ್ಲವಾದರೂ ಪಕ್ಷದ ಚೌಕಟ್ಟಿನ ತೀರ್ಮಾನಕ್ಕೆ ಬದ್ಧರಾಗಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ನವೆಂಬರ್ ಕ್ರಾಂತಿಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆಯೇ ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಸಾತನೂರು ಮತ್ತು ಕನಕಪುರದಲ್ಲಿ ತಲಾ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್, ರಾಜಕೀಯ ಪ್ರವೇಶದ ಆರಂಭದಿಂದಲೂ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಂದ ಸಾಕಷ್ಟು ಪ್ರತಿರೋಧವನ್ನು ಎದುರಿಸಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಆದರೆ, ಇವರಿಗೆ ಹೆಚ್ಚು ಹೊಡೆತ ನೀಡಿದ್ದು ಪಕ್ಷದೊಳಗಿನವರ ವಿರೋಧ. ಇದರಿಂದಾಗಿ ಪಕ್ಷದಲ್ಲಿಯೇ ಹುದ್ದೆಗಳನ್ನು ಪಡೆಯಲು ಸಾಕಷ್ಟು ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಒಮ್ಮೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದರೆ ಮತ್ತೊಮ್ಮೆ ಸಚಿವ ಸ್ಥಾನವೂ ದೂರವಾಗಿತ್ತು. ಇದರ ಹೊರತಾಗಿಯೂ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಡಿ.ಕೆ.ಶಿವಕುಮಾರ್ ಅವರು ಹೋರಾಟದ ಮೂಲಕವೇ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಸಿಎಂ ಸ್ಥಾನದ ಮೇಲೂ ಕಣ್ಣಿಟ್ಟರು. ಆದರೆ, ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಒಲ್ಲದ ಮನಸ್ಸಿನಿಂದಲೇ ಉಪಮುಖ್ಯಮಂತ್ರಿ ಆದ ಡಿ.ಕೆ.ಶಿವಕುಮಾರ್, ಈಗ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು, ಅದೇ ಹೈ ಕಮಾಂಡ್ ನಿರ್ದೇಶನಕ್ಕಾಗಿ ಕಾದು ಕುಳಿತಿದ್ದಾರೆ.
ಜಿಲ್ಲೆಯಲ್ಲಿ ಹಿರಿಯ ಶಾಸಕರೂ ಆಗಿರುವ ಮಾಗಡಿಯ ಬಾಲಕೃಷ್ಣ ಸದ್ಯಕ್ಕೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ. ಆದರೆ, ಹಿಂದಿನಿಂದಲೂ ಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಸರ್ಕಾರ ರಚನೆ ವೇಳೆಯೇ ಇಂಗಿತ ವ್ಯಕ್ತಪಡಿಸಿದ್ದರು. ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ ದೊರೆತ ನಂತರ ತಣ್ಣಗೆ ಆಗಿದ್ದ ಬಾಲಕೃಷ್ಣ, ನವೆಂಬರ್ ಕ್ರಾಂತಿಯಲ್ಲಿ ಆಗಬಹುದಾದ ಬದಲಾವಣೆಯಲ್ಲಿ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ ಕ್ರಾಂತಿಯಲ್ಲಿ ಒಂದು ವೇಳೆ ನಾಯಕತ್ವವೇ ಬದಲಾದರೆ ಡಿ.ಕೆ.ಶಿವಕುಮಾರ್ ಅವರ ಮಂತ್ರಿ ಮಂಡಲದಲ್ಲಿ ಮಹತ್ವದ ಖಾತೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಕ್ರಾಂತಿ ಏನೂ ನಡೆಯದೆ ಸಂಪುಟ ಮರುರಚನೆಯಾದರೂ ಮಂತ್ರಿಗಿರಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಹಿರಿಯ ಶಾಸಕ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ಮಂತ್ರಿಗಿರಿ ಪಡೆಯುವ ಆಟದಿಂದ ದೂರವೇ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.