ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಯುವ ರೌಡಿ ಶೀಟರ್ಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಭಯ, ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅಂಥ 13 ಜನರನ್ನು ಗುರುತಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ರೌಡಿ ಶೀಟರ್ಗಳ ಪರೇಡ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ, ಮನರಂಜನೆ, ಮಾಹಿತಿ ವಿಡಿಯೋ ಹಂಚಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ, ಯುವ ರೌಡಿ ಶೀಟರ್ಗಳು ಖಾತೆ ತೆರೆದು ಯಾವುದೋ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ, ಫಂಕ್ಷನ್ನಲ್ಲಿ ಭಾಗವಹಿಸಿರುವ, ಜನ್ಮದಿನ ಸಂಭ್ರಮಾಚರಣೆಯಲ್ಲಿ ತೆಗೆಸಿರುವ ಫೋಟೋ ಹಂಚಿಕೊಂಡು ತಮಗೆ ಸಾವಿರಾರು ಜನ ಫಾಲೋವರ್ಸ್ ಇದ್ದಾರೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ನಮ್ಮಲ್ಲಿ ಒಬ್ಬರು ಪಾಕಿಸ್ತಾನ ಪ್ರಜೆ ಇದ್ದಾರೆ. ಮೇಲಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಂದ ಏನು ಸೂಚನೆ ಬರುತ್ತದೆಯೋ, ಅದನ್ನು ನೋಡಿಕೊಂಡು ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇತ್ತೀಚೆಗೆ ಹುಬ್ಬಳ್ಳಿ ನಗರ ಸೇರಿ ರಾಜ್ಯದಲ್ಲಿ ವಿವಿಧೆಡೆ ರೌಡಿ ಶೀಟರ್ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಾಗೂ ರೌಡಿಗಳೇ ಕೊಲೆಯಾದ ಘಟನೆಗಳ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಇಂದು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿಗಳ ಪರೇಡ್ ಮಾಡಿದ್ದೇವೆ. ಒಟ್ಟು 980 ರೌಡಿ ಶೀಟರ್ಗಳು ಇದ್ದರು. ಅನಾರೋಗ್ಯ, ಇನ್ನಿತರ ಕಾರಣಗಳಿಂದ ಕೆಲವರು ಬಂದಿಲ್ಲ ಎಂದು ತಿಳಿಸಿದರು.
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 50ರಿಂದ 200ರ ವರೆಗೆ ರೌಡಿ ಶೀಟರ್ಗಳು ಇದ್ದಾರೆ. ವರ್ಷದ ಪ್ರಾರಂಭದಲ್ಲಿ 50 ಜನ ರೌಡಿಗಳನ್ನು ಬೀದರ, ಕಲಬುರಗಿ, ಚಾಮರಾಜನಗರ ಸೇರಿ ವಿವಿಧೆಡೆಯ ನಿರ್ದಿಷ್ಟ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿತ್ತು. ಗಡಿಪಾರು ಆಗಿರುವ ರೌಡಿಗಳು ಅದೇ ಠಾಣೆ ವ್ಯಾಪ್ತಿಯಲ್ಲಿ ಇದ್ದಾರೆಯೇ ಎಂಬುದನ್ನು ನಾವು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳುತ್ತೇವೆ. ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ 50-60 ಜನ ರೌಡಿಗಳ ಪಟ್ಟಿ ತಯಾರಿಸಿದ್ದೇವೆ. ಇವರನ್ನು ಆದಷ್ಟು ಬೇಗ ಗಡಿಪಾರು ಮಾಡಲಾಗುವುದು ಎಂದು ಹೇಳಿದರು.
ಕೆಲವರು 2,000 ಇಸ್ವಿಯಿಂದ ರೌಡಿ ಶೀಟರ್ ಪಟ್ಟಿಯಲ್ಲಿ ಇದ್ದಾರೆ. 65 ವರ್ಷದ ಮೇಲ್ಪಟ್ಟ, ಉತ್ತಮ ನಡತೆಯುಳ್ಳವರ ರೌಡಿ ಶೀಟ್ ಕ್ಲೋಸ್ ಮಾಡುತ್ತೇವೆ. 2024ರಲ್ಲಿ ಕೆಲವರ ರೌಡಿ ಶೀಟ್ ಕ್ಲೋಸ್ ಮಾಡಿದ್ದೇವು ಎಂದರು.
ಡಿಸಿಪಿಗಳಾದ ಸಿ.ಆರ್. ರವೀಶ, ಮಹಾನಿಂದ ನಂದಗಾವಿ, ಇತರರು ಇದ್ದರು.