ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.  
ಜಿಲ್ಲೆ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ಮುಂದೆ ವಚನ ಪಠಣ ಕಡ್ಡಾಯ? ಸಚಿವ ಎಂ.ಬಿ. ಪಾಟೀಲ ಹೇಳಿದ್ದೇನು?

ವಿಜಯಪುರ: ಬಸವಣ್ಣನವರ ವಚನಗಳನ್ನು ಪಠಿಸುವ ಮೂಲಕವೇ ಸರ್ಕಾರದ ಕಾರ್ಯಕ್ರಮಗಳನ್ನು ಆರಂಭಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಶೀಘ್ರದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂವಿಧಾನ ಮತ್ತು ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಡೆಯುತ್ತಿದೆ. ನುಡಿದಂತೆ ನಡೆಯುವ ಈ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗುತ್ತಿದೆ. ಆ ಮೂಲಕ ಬಸವಣ್ಣನವರು ಕಂಡ ಸಮಸಮಾಜ ನಿರ್ಮಾಣದ ಕನಸು ಸಾಕಾರಗೊಳಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಸವಣ್ಣನವರು ನಾಡು ಕಂಡ ನಿಜವಾದ ಧರ್ಮ ಮತ್ತು ಸಮಾಜ ಸುಧಾರಕ, 12ನೇ ಶತಮಾನದ ಶ್ರೇಷ್ಠ ಸಂತ. ಹೀಗಾಗಿ ಮಹಾತ್ಮ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದ್ದು, ಇನ್ಮುಂದೆ ಸರ್ಕಾರದ ಪ್ರತಿ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ವಚನ ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಪ್ರತಿಕ್ರಿಯಿಸಿದರು.

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ವಿಜಯಪುರ ಜಿಲ್ಲೆಯ ಹೆಮ್ಮೆ. ಅಲ್ಲದೇ, ಸಿದ್ದರಾಮಯ್ಯ ಸರ್ಕಾರ ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಡೆಯುತ್ತಿರುವುದು ಕೂಡ ಹೆಮ್ಮೆಯ ವಿಚಾರವೇ. ಬಸವಣ್ಣನವರ ಆಶಯವೇ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಹೀಗಾಗಿ ಸಂವಿಧಾನ ಮತ್ತು ಬಸವಣ್ಣನವರ ಆಶಯವೇ ಕಾಂಗ್ರೆಸ್‌ನ ಆಶಯ. ಹೀಗಾಗಿ ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನವರ ಹೆಸರು ಇಡಲಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಘೋಷಿತ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರಲಾಗಿದೆ. ರಾಜ್ಯದ ಶೇ.80 ರಷ್ಟು ಜನರಿಗೆ ಈ ಸೌಲಭ್ಯಗಳು ಸಿಗುತ್ತಿವೆ. ಶೀಘ್ರದಲ್ಲಿಯೇ ನೂತನ ಕೈಗಾರಿಕೆ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ದಾವೋಸ್‌ನಲ್ಲಿ ನಡೆದ ಆರ್ಥಿಕ ಶೃಂಗ ಸಭೆ ಸೇರಿದಂತೆ ಜಾಗತಿಕ ಮಟ್ಟದ ಹಲವು ಸಭೆಗಳಲ್ಲಿ ಭಾಗವಹಿಸಿ ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಲುಲು ಗ್ರುಪ್ ಸಹಿತ ಅನೇಕ ಕಂಪನಿಗಳೂ ಬಂಡವಾಳ ಹೂಡಿಕೆ ಮಾಡಲು ಸಮ್ಮತಿಸಿವೆ. ರಾಜ್ಯಕ್ಕೆ 24 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲು ಅನೇಕ ಕಂಪನಿಗಳು ಒಪ್ಪಿದ್ದು, ಇದರಲ್ಲಿ 8500 ಕೋಟಿ ರೂ.ಬಂಡವಾಳ ಹೂಡಲು ಕಂಪನಿಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದರು.